ಧಾರವಾಡ- ಹು-ಧಾ ಪಾಲಿಕೆಗೆ ದೊಡ್ಡ ತಲೆನೋವಾಗಿದ್ದ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ವಿಚಾರ ಇದೀಗ ಒಂದು ಹಂತಕ್ಕೆ ಬಂದು ನಿಂತಿದೆ. ಹೌದು, ಟಿಪ್ಪು ಸೇರಿ ಎಲ್ಲ ಜಯಂತಿಗೂ ಷರತ್ತು ಬದ್ಧ ಅವಕಾಶ ನೀಡಲಾಗಿದೆ. ಜಯಂತಿ ಆಚರಣೆಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ. ಟಿಪ್ಪು ಜಯಂತಿ ಮಾತ್ರಲ್ಲದೆ ಕನಕದಾಸ, ಒನಕೆ ಓಬವ್ವ ಜಯಂತಿ ಆಚರಣೆ ಮಾಡಬೇಕು ಎಂದು ಸಂಘಟಕರು ಮನವಿ ಮಾಡಿದ್ದರು.
ಇದೀಗ ವಿರೋಧ ಪಕ್ಷದ ನಾಯಕರು, ಆಯುಕ್ತರೊಂದಿಗೆ ಮೇಯರ್ ಸಭೆ ನಡೆಸಿ, ಪಾಲಿಕೆ ನಿರ್ಣಯವನ್ನು ತಿಳಿಸಿದ್ದಾರೆ ಮೇಯರ್ ಈರೇಶ್ ಅಂಚಟಗೇರಿ. ಇನ್ನು ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಬೇಡಾ ಎಂದು ವಿರೋಧ ಪಕ್ಷದ ನಾಯಕ ದೊರರಾಜ ಮಣಿಕುಂಟ್ಲ ಒತ್ತಾಯ ಮಾಡಿದ್ದರು. ಆದರೆ ಇದೀಗ ಜಯಂತಿಗೆ ಅವಕಾಶ ನೀಡಲಾಗಿದೆ.
ಇನ್ನು ಈ ಮೈದಾನದಲ್ಲಿ ಮಾರ್ಚ್ ನಲ್ಲಿ ರತಿ, ಮನ್ಮಥನ ಪ್ರತಿಷ್ಠಾಪನೆಗೆ ಅವಕಾಶ ಕೇಳಲಾಗಿತ್ತು. ಈ ಕುರಿತು ಪಾಲಿಕೆಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಗಜಾನನ ಮಹಾಮಂಡಳಿ ಹೋಳಿ ಆಚರಣೆಗೂ ಅವಕಾಶ ಕೇಳಿ ಮನವಿ ಸಲ್ಲಿಸಲಾಗಿತ್ತು. ಇನ್ನು ಒನಕೆ ಓಬವ್ಬ ಜಯಂತಿಗೆ ಅವಕಾಶ ಕೇಳಿ ಮನವಿ ಸಲ್ಲಿಸಿತ್ತು. ಒಟ್ನಲ್ಲಿ ಈ ಜಯಂತಿ ಆಚರಣೆ ಮನವಿ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು ಪಾಲಿಕೆಗೆ. ಇದೀಗ ಎಲ್ಲಾ ಜಯಂತಿ ಮಾಡಲು ಅವಕಾಶ ಕೊಟ್ಟ ಹಿನ್ನೆಲೆ ಒಂದು ರೀತಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.