ಹುಡುಗಿಯನ್ನು ಐಟಂ ಎಂದು ಕರೆಯುವುದು ಅವಹೇಳನಕಾರಿಯಾಗಿದ್ದು, ಇದು ಆಕೆಯನ್ನು ಲೈಂಗಿಕವಾಗಿ ಗುರಿಯಾಗಿಸಿ ಅಪಮಾನ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಮುಂಬೈ ವಿಶೇಷ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣ ಒಂದರ ವಿಚಾರಣೆ ವೇಳೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಜೆ. ಅನ್ಸಾರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಯುವಕನಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.
2015ರ ಜುಲೈ 14ರಂದು ಮುಂಬೈ ಹೊರ ವಲಯದಲ್ಲಿ ಯುವಕನೊಬ್ಬ ಹದಿನಾರು ವರ್ಷದ ಬಾಲಕಿ ಶಾಲೆಯಿಂದ ಹಿಂದಿರುಗುತ್ತಿದ್ದಾಗ ಆಕೆಗೆ ಐಟಂ ಎಂದು ಕರೆದಿದ್ದಲ್ಲದೆ ಜಡೆಯನ್ನು ಹಿಡಿದು ಎಳೆದಾಡಿದ್ದ.
ಈ ಹಿನ್ನಲೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇದರ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ಸುಧೀರ್ಘಕಾಲ ನಡೆದು ಈಗ ತೀರ್ಪು ಹೊರಬಿದ್ದಿದೆ.