ಹುಬ್ಬಳ್ಳಿ – ಧಾರವಾಡ ಅವಳಿ ನಗರದ ಪ್ರಭಾವಿ ರಾಜಕಾರಣಿ ಹಾಗೂ ಮಾಜಿ ಸಚಿವ ಎಸ್.ಆರ್. ಮೋರೆ ಹುಟ್ಟು ಹಬ್ಬದ ದಿನವೇ ವಿಧಿ ವಶರಾಗಿದ್ದಾರೆ.
82 ವರ್ಷದ ಎಸ್.ಆರ್. ಮೋರೆ, ಧಾರವಾಡದಲ್ಲಿನ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಎಸ್.ಆರ್. ಮೋರೆ, ಧಾರವಾಡದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇಂದಿಗೂ ಅವಳಿ ನಗರದಲ್ಲಿ ಅವರು ಪ್ರಭಾವಿ ರಾಜಕಾರಣಿಯಾಗಿದ್ದರು. ಬಂಗಾರಪ್ಪ ಅವರ ಅವಧಿಯಲ್ಲಿ ಸಹಕಾರಿ ಸಚಿವರಾಗಿ ಹಾಗೂ ಧರಂಸಿಂಗ್ ನೇತೃತ್ವದ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಎಸ್. ಆರ್. ಮೋರೆ ಡಿಸೆಂಬರ್ 9ರಂದು ಜನಿಸಿದ್ದು, ಇಂದು ಅವರ ಹುಟ್ಟು ಹಬ್ಬವಿತ್ತು. ಆದರೆ, ಅದೇ ದಿನ ಇಹಲೋಕ ತ್ಯಜಿಸಿದ್ದಾರೆ. ಈ ಭಾಗದಲ್ಲಿ ಅವರನ್ನು ಆಶ್ರಯ ಮನೆ ಹರಿಕಾರ ಎಂದೇ ಜನರು ಕರೆಯುತ್ತಿದ್ದರು.
ಅವಳಿ ನಗರದಲ್ಲಿ ಎರಡ್ಮೂರು ದಶಕಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಸಂದರ್ಭದಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ಜನರಿಗೆ ನೀರು ಸಿಗುವಂತೆ ಶ್ರಮ ವಹಿಸಿದ್ದರು. ಅವಳಿ ನಗರದ ಜನರು ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.