ಕಾರ್ನ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತುಂಬಾ ಇಷ್ಟ. ಕಾರ್ನ್ ನಿಂದ ರುಚಿಕರವಾದ ಕೋಸಂಬರಿ ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಮಾಡಿ ರುಚಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಸ್ವೀಟ್ ಕಾರ್ನ್-2, ದಾಳಿಂಬೆಹಣ್ಣು-1, ಕ್ಯಾರೆಟ್ -1/2, ಕೊತ್ತಂಬರಿಸೊಪ್ಪು-3 ಟೇಬಲ್ ಸ್ಪೂನ್ ನಷ್ಟು, ತೆಂಗಿನಕಾಯಿತುರಿ-2 ಟೇಬಲ್ ಸ್ಪೂನ್, ಲಿಂಬೆಹಣ್ಣಿನ ರಸ-1 ಚಮಚ, ಹಸಿಮೆಣಸು-1, ಎಣ್ಣೆ-1 ಟೀ ಸ್ಪೂನ್, ಸಾಸಿವೆ-1/4 ಟೀ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಸ್ವೀಟ್ ಕಾರ್ನ್ ಅನ್ನು ಚೆನ್ನಾಗಿ ತೊಳೆದು ಅದರ ಕಾಳು ಬಿಡಿಸಿಕೊಳ್ಳಿ. ಹಾಗೇ ದಾಳಿಂಬೆ ಹಣ್ಣನ್ನು ಕತ್ತರಿಸಿಕೊಂಡು ಅದರ ಬೀಜ ಬಿಡಿಸಿಕೊಳ್ಳಿ. ಕ್ಯಾರೆಟ್ ತುರಿದಿಟ್ಟುಕೊಳ್ಳಿ. ಒಂದು ಬೌಲ್ ಗೆ ಕ್ಯಾರೆಟ್ ತುರಿ, ಕೊತ್ತಂಬರಿಸೊಪ್ಪು, ಸಣ್ಣಗೆ ಕತ್ತರಿಸಿದ ಹಸಿಮೆಣಸು, ಲಿಂಬೆಹಣ್ಣಿನ ರಸ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದಕ್ಕೆ ದಾಳಿಂಬೆಹಣ್ಣು, ತೆಂಗಿನಕಾಯಿ ತುರಿ, ಸ್ವಿಟ್ ಕಾರ್ನ್ ಹಾಕಿ ಮಿಕ್ಸ್ ಮಾಡಿ. ನಂತರ ಒಗ್ಗರಣೆ ಪಾತ್ರೆಗೆ ಎಣ್ಣೆ ಮತ್ತು ಸಾಸಿವೆ ಹಾಕಿ ಒಗ್ಗರಣೆ ರೆಡಿ ಮಾಡಿ ಇದಕ್ಕೆ ಸೇರಿಸಿದರೆ ರುಚಿಕರವಾದ ಕೋಸಂಬರಿ ರೆಡಿ.