ಮೆಂತ್ಯ ಲೇಹ್ಯ ಇದು ಬಾಣಂತಿಯರಿಗೆ ತುಂಬಾ ಒಳ್ಳೆಯದು. ಹಾಗೇ ಬೆನ್ನುನೋವು ಸಮಸ್ಯೆ ಇರುವವರು ಕೂಡ ಇದನ್ನು ಸೇವಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದನ್ನು ತಿನ್ನಬೇಕು. ಮಾಡುವ ವಿಧಾನ ಇಲ್ಲಿದ ನೋಡಿ.
ಬೇಕಾಗುವ ಸಾಮಗ್ರಿಗಳು:
ಮೆಂತ್ಯಕಾಳು-1/4 ಕಪ್, ನೀರು 1 ¼ ಕಪ್, ತುಪ್ಪ-1/4 ಕಪ್, ½ ಕಪ್ ಬೆಲ್ಲ.
ಮಾಡುವ ವಿಧಾನ:
ಮೆಂತ್ಯಕಾಳುಗಳನ್ನು ರಾತ್ರಿ ಚೆನ್ನಾಗಿ ತೊಳೆದು 1 ಕಪ್ ನೀರಿನಲ್ಲಿ ನೆನೆಸಿಟ್ಟುಕೊಂಡಿರಿ. ಬೆಳಿಗ್ಗೆ ಮೆಂತ್ಯಕಾಳುಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ ನಯವಾಗಿ ರುಬ್ಬಿಕೊಂಡು ಒಂದು ದಪ್ಪ ತಳದ ಬಾಣಲೆಗೆ ತೆಗೆದಿಟ್ಟುಕೊಳ್ಳಿ.
ಇದನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ¼ ಕಪ್ ನೀರು ಹಾಕಿ ಚೆನ್ನಾಗಿ ಇದನ್ನು ಮಿಕ್ಸ್ ಮಾಡಿಕೊಂಡು 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಬೆಲ್ಲದ ಪುಡಿ ಸೇರಿಸಿ ಕೈಯಾಡಿಸುತ್ತಾ ಇರಿ. ಸಣ್ಣ ಉರಿಯಲ್ಲಿಯೇ ಬೇಯಿಸಿಕೊಳ್ಳಿ. ಇದು ಗಟ್ಟಿಯಾಗುತ್ತ ಬರುತ್ತಿದ್ದಂತೆ ತಳ ಬಿಡುತ್ತದೆ ಆಗ ಗ್ಯಾಸ್ ಅಫ್ ಮಾಡಿ. ತಣ್ಣಗಾದ ಮೇಲೆ ಒಂದು ಡಬ್ಬಕ್ಕೆ ತುಂಬಿಸಿಕೊಳ್ಳಿ.