ತೂಕ ಕಡಿಮೆ ಮಾಡಿಕೊಳ್ಳಬೇಕು ಅಂದಾಕ್ಷಣ ನಮಗೆ ನೆನಪಾಗೋದು ವ್ಯಾಯಾಮ. ನಿಯಮಿತವಾಗಿ ವ್ಯಾಯಾಮ ಮಾಡಿದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಇದರ ಜೊತೆಜೊತೆಗೆ ಆಹಾರ ಪದ್ಧತಿ ಬಗೆಗೂ ಹೆಚ್ಚಿನ ಗಮನ ಹರಿಸಬೇಕು. ಪ್ರತಿನಿತ್ಯ ನೀವು ಸೇವಿಸುವ ಆಹಾರ ಕ್ಯಾಲೋರಿ ಬರ್ನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತೂಕ ಇಳಿಸುವ ಹಂಬಲ ಉಳ್ಳವರು ಸೇವಿಸಲೇಬೇಕಾದ ವಸ್ತು ಅಂದ್ರೆ ಶುಂಠಿ. ಪ್ರತಿದಿನ ಶುಂಠಿ ಚಹಾ ಕುಡಿಯೋದನ್ನು ಅಭ್ಯಾಸ ಮಾಡಿಕೊಳ್ಳಿ. ತೂಕ ಹೆಚ್ಚಾಗಲು ಉರಿಯೂತ ಸಹ ಕಾರಣ. ಶುಂಠಿ ಚಹಾವು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ. ದೇಹದಲ್ಲಿರೋ ಅಪಾಯಕಾರಿ ರಾಸಾಯನಿಕ, ಸೂಕ್ಷ್ಮಾಣುಗಳು ಹಾಗೂ ಅನಾರೋಗ್ಯಕರ ಆಹಾರ ಪದಾರ್ಥಗಳು ಉರಿಯೂತವನ್ನು ಉಂಟುಮಾಡುತ್ತವೆ.
ನಿಯಮಿತವಾಗಿ ಶುಂಠಿ ಚಹಾ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಮತ್ತು ಹಸಿವಿನ ಭಾವನೆ ಕಡಿಮೆಯಾಗುತ್ತದೆ. ಹೊಟ್ಟೆ ಭರ್ತಿಯಾಗಿರುವ ಬಗ್ಗೆ ಇದು ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಹಾಗಾಗಿ ಅತಿಯಾಗಿ ತಿನ್ನುವುದನ್ನು ತಡೆಯಬಲ್ಲದು.
ಅಜೀರ್ಣ ಮತ್ತು ಹೊಟ್ಟೆ ಉಬ್ಬರಿಸುವುದು ಕೂಡ ತೂಕ ಹೆಚ್ಚಾಗಲು ಕಾರಣ. ಶುಂಠಿ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಪರಿಣಾಮಕಾರಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೀವು ಕ್ಯಾಲೊರಿ ಸುಡುವ ಪ್ರಕ್ರಿಯೆಯನ್ನು ಹೆಚ್ಚಿಸಲು ಬಯಸಿದರೆ, ಪ್ರತಿದಿನ ಬೆಳಿಗ್ಗೆ ಒಂದು ಕಪ್ ಬಿಸಿ ಶುಂಠಿ ಚಹಾವನ್ನು ಸೇವಿಸಬೇಕು.