ಕೂದಲಿನ ಆರೈಕೆ ಮಾಡಿಕೊಳ್ಳುವುದೇ ಇತ್ತೀಚೆಗೆ ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ಕೂದಲು ಉದುರುವುದು, ಬಿಳಿ ಕೂದಲು ಹೀಗೆ ನಾನಾ ಕಾರಣಗಳಿಂದ ಅನೇಕರು ಕೂದಲಿನ ಆರೈಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ.
ಒಣ ಕೂದಲು, ಜಿಡ್ಡಿನ ಕೂದಲು, ನೆರೆ ಕೂದಲು, ಮೃದುವಾದ ಕೂದಲು, ಒರಟು ಕೂದಲು ಹೀಗೆ ಕೂದಲಿನಲ್ಲಿ ಅನೇಕ ಬಗೆ ಇವೆ. ಸೊಂಪಾದ ಕೂದಲಿನ ಬೆಳವಣಿಗೆಗೆ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಮೊಳಕೆ ಕಾಳು, ಸೊಪ್ಪು, ಕಾಯಿ ಪಲ್ಯೆ ಮೊದಲಾದವುಗಳಿಂದ ಕೂದಲಿನ ಕಾಂತಿ ಹೆಚ್ಚಾಗುತ್ತದೆ.
ಸೀಗೆಕಾಯಿ ಬಳಸುವುದರಿಂದ ಅನುಕೂಲವಾಗುತ್ತದೆ. ಕೆಲವೊಮ್ಮೆ ಇದನ್ನು ಬಳಸುವವರಿಗೆ ನೆಗಡಿ, ಕೆಮ್ಮು ಬರುವ ಸಾಧ್ಯತೆ ಇರುತ್ತದೆ. ಸೀಗೆಕಾಯಿಯನ್ನು ನೀರಿನಲ್ಲಿ ಕಾಯಿಸಿ ರಸ ಹಿಂಡಿಕೊಂಡು ಬಳಸಿದರೆ ಒಳ್ಳೆಯದು.
ಲೋಳೆಸರದ ತಿರುಳನ್ನು ತಲೆಗೆ ಹಚ್ಚಿಕೊಂಡು ಗಂಟೆಯ ಬಳಿಕ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ನುಗ್ಗೆ ತೊಗಟೆಯ ರಸವನ್ನು ತೆಗೆದು ಅದಕ್ಕೆ ಕೊಬ್ಬರಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ ತಲೆಗೆ ಹಚ್ಚಿಕೊಂಡರೆ ಹೊಟ್ಟು ಕಡಿಮೆಯಾಗುವುದಲ್ಲದೇ, ಕೂದಲು ಸೊಂಪಾಗಿ ಬೆಳೆಯುತ್ತದೆ.
ದಂಟಿನ ಸೊಪ್ಪು ಅರೆದುಕೊಂಡು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು.
ಸರಳ ವ್ಯಾಯಾಮದಿಂದ ರಕ್ತ ಸಂಚಾರ ಸಮರ್ಪಕವಾಗಿ ಕೂದಲ ಬೆಳವಣಿಗೆಗೆ ಪೂರಕವಾಗುತ್ತದೆ. ಒತ್ತಡ ಕಡಿಮೆ ಮಾಡಿಕೊಂಡು ಸುಖ ನಿದ್ದೆ ಮಾಡಿದಲ್ಲಿ ಕೂದಲ ಬೆಳವಣಿಗೆಗೆ ಅನುಕೂಲವಾಗುತ್ತದೆ.