ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆ ಜೀವನದ ಮಹತ್ವದ ಘಟ್ಟ. ಹೊಟ್ಟೆಯಲ್ಲೊಂದು ಮಗು ಬೆಳೆಯುತ್ತಿದೆ ಎಂಬ ವಿಷ್ಯ ತಿಳಿದಾಗಿನಿಂದ ಮಗು ಹೊರಗೆ ಬರುವವರೆಗೂ ಮಹಿಳೆಗೆ ಆತಂಕದ ಜೊತೆ ಆನಂದ ಮನೆ ಮಾಡಿರುತ್ತದೆ.
ಹಾಗೆ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ. ಗರ್ಭಿಣಿಯಾದಾಗ ಸ್ಟೈಲಿಶ್ ಬಟ್ಟೆ ಹಾಗೂ ಚಪ್ಪಲಿಗಳು ಮೂಲೆ ಸೇರುವುದು ಮಾಮೂಲಿ.
ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರು ತಮ್ಮ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಇದಕ್ಕೆ ನಟಿ ಕರೀನಾ ಕಪೂರ್ ಉತ್ತಮ ಉದಾಹರಣೆ. ಗರ್ಭಿಣಿಯಾದಾಗ ಸ್ಟೈಲಿಶ್ ಬಟ್ಟೆಗಳನ್ನು ಧರಿಸಿ ಎಲ್ಲರ ಕಣ್ಮನ ಸೆಳೆದಿದ್ದಳು ಬೇಬೋ. ಈ ಸ್ಟೈಲ್ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಮಾನ್ಯ ಜನರೂ ಹೊಸ ಫ್ಯಾಷನ್ ಗೆ ಹೊಂದಿಕೊಂಡಿದ್ದಾರೆ.
ಸೀರೆ ಇಲ್ಲ ಚೂಡಿ ಹಾಕಿ ರಸ್ತೆಗಿಳಿಯುತ್ತಿದ್ದ ಕಾಲ ಈಗಿಲ್ಲ. ಗರ್ಭಿಣಿಯರು ಮಾಡರ್ನ್ ಡ್ರೆಸ್ ತೊಟ್ಟು ಬಿಂದಾಸ್ ಆಗಿ ಓಡಾಡ್ತಾರೆ. ಗರ್ಭಿಣಿಯರಿಗೆ ಪಲಾಜೊ ಅತ್ಯುತ್ತಮ ಉಡುಗೆ. ಇದು ಗರ್ಭಿಣಿಯರ ಲುಕ್ ಬದಲಿಸುವ ಜೊತೆಗೆ ಆರಾಮವೆನಿಸುತ್ತದೆ. ಮೇಲೆ ಟೀ ಶರ್ಟ್ ಅಥವಾ ಕುರ್ತಾ ಹಾಕಬಹುದು. ಟೀ ಶರ್ಟ್ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ. ಬೇಕಾದ್ರೆ ಟೀ ಶರ್ಟ್ ಜೊತೆ ಸ್ಕಾರ್ಪ್ ಹಾಕಿಕೊಳ್ಳಬಹುದು.
ಗರ್ಭಿಣಿಯರಿಗಾಗಿಯೇ ಮಾರುಕಟ್ಟೆಗೆ ವಿವಿಧ ವಿನ್ಯಾಸದ ಜೀನ್ಸ್ ಬಂದಿದೆ. ಇದು ಗರ್ಭಿಣಿಯರ ಅಂದ ಹೆಚ್ಚಿಸುವ ಜೊತೆಗೆ ಆರಾಮ ನೀಡುತ್ತದೆ.
ಹವಾಮಾನಕ್ಕೆ ತಕ್ಕಂತೆ ಚೆಂದದ ಬಟ್ಟೆ ಧರಿಸಬಹುದು. ಪಾರ್ಟಿಗೆ ಹೋಗುವುದಾದ್ರೆ ಲಾಂಗ್ ಅಥವಾ ಮ್ಯಾಕ್ಸಿ ಡ್ರೆಸ್ ಬೆಸ್ಟ್.
ಸಾಂಪ್ರದಾಯಿಕ ಉಡುಗೆಯಲ್ಲೂ ಸಾಕಷ್ಟು ಆಯ್ಕೆಗಳು ಸಿಗುತ್ತವೆ. ಸಮಾರಂಭಗಳಿಗೆ ಹೋಗುವ ವೇಳೆ ಗರ್ಭಿಣಿಯರಿಗಾಗಿ ಮಾರುಕಟ್ಟೆಗೆ ಬಂದಿರುವ ಸಲ್ವಾರ್ ಆಯ್ಕೆ ಮಾಡಿಕೊಳ್ಳಿ.
ಹೈ ಹೀಲ್ಡ್ ಚಪ್ಪಲಿ ಬೇಡವೇ ಬೇಡ. ಹಾಗೆ ಕೃತಕ ಆಭರಣಗಳು ಅಲರ್ಜಿಯುಂಟು ಮಾಡುವ ಸಾಧ್ಯತೆಗಳಿರುತ್ತವೆ. ಕೆಲವೊಂದು ಸುಗಂಧ ದ್ರವ್ಯ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಫ್ಯಾಷನ್ ಹೆಸರಿನಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಆರೋಗ್ಯದ ಜೊತೆಗೆ ಫ್ಯಾಷನ್ ಇರಲಿ. ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಾಪಿಂಗ್ ಬೇಡ. ಯಾಕೆಂದ್ರೆ ಮುಂದೆ ಅದು ಉಪಯೋಗಕ್ಕೆ ಬರುವುದಿಲ್ಲ.