ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಕತ್ತಿ ಕಳೆದ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
1961 ಮಾರ್ಚ್ 14ರಂದು ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದ್ದ ಉಮೇಶ್ ಕತ್ತಿಯವರು, ರಾಜಕಾರಣಿ ಮಾತ್ರವಲ್ಲದೆ ಕೃಷಿಕ ಹಾಗೂ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು.
ಒಟ್ಟು 9 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಉಮೇಶ್ ಕತ್ತಿ 8 ಬಾರಿ ಗೆಲುವು ಕಂಡಿದ್ದಾರೆ. ಮಹತ್ವದ ಸಂಗತಿ ಎಂದರೆ ಹಲವು ಬಾರಿ ವಿಭಿನ್ನ ಪಕ್ಷಗಳಿಂದ ಸ್ಪರ್ಧೆಗಿಳಿದಿದ್ದರೂ ಗೆಲುವು ಸಾಧಿಸಿದ್ದಾರೆ.
ತಮ್ಮ ರಾಜಕೀಯ ಜೀವನದಲ್ಲಿ ಒಟ್ಟು ಆರು ಬಾರಿ ಪಕ್ಷ ಬದಲಾವಣೆ ಮಾಡಿರುವ ಇವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೇಳಿಕೆ ನೀಡಿದ್ದರಲ್ಲದೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ಮಾತುಗಳನ್ನು ಆಡಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಅಖಂಡ ಕರ್ನಾಟಕಕ್ಕೆ ಒಂದಲ್ಲ ಒಮ್ಮೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದರು.