ಎರಡು ವರ್ಷಗಳ ಹಿಂದೆ ಕೊರೊನಾ ಮಹಾಮಾರಿ ದೇಶದಲ್ಲಿ ವಕ್ಕರಿಸಿದ ಪರಿಣಾಮ ಇದರ ನಿಯಂತ್ರಣಕ್ಕಾಗಿ ತಿಂಗಳಾನುಗಟ್ಟಲೆ ಲಾಕ್ಡೌನ್ ವಿಧಿಸಲಾಗಿತ್ತು. ಅಲ್ಲದೆ ರೈಲು, ಬಸ್, ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿತ್ತು. ಆ ಬಳಿಕ ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಹಂತಹಂತವಾಗಿ ಲಾಕ್ಡೌನ್ ಹಿಂಪಡೆಯಲಾಗಿದ್ದು, ಬಳಿಕ ಪೂರ್ಣ ಪ್ರಮಾಣದಲ್ಲಿ ಎಲ್ಲ ವ್ಯವಸ್ಥೆಗಳು ಆರಂಭಗೊಂಡವು.
ಮಾರ್ಚ್ 2020 ರಲ್ಲಿ ರೈಲ್ವೆ ಇಲಾಖೆ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ರದ್ದುಪಡಿಸಿದ್ದು, ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದರೂ ಸಹ ರಿಯಾಯಿತಿಯನ್ನು ನೀಡಲಾಗುತ್ತಿಲ್ಲ. ಇದರ ಮಧ್ಯೆ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ಅಚ್ಚರಿಯ ಮಾಹಿತಿಯೊಂದು ಬಹಿರಂಗವಾಗಿದೆ.
ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ರದ್ದುಪಡಿಸಿದ ಕಾರಣಕ್ಕೆ ಭಾರತೀಯ ರೈಲ್ವೆ ಇಲಾಖೆ ಕಳೆದ ಎರಡು ವರ್ಷಗಳಲ್ಲಿ 1,500 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಗಳಿಸಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಮಾರ್ಚ್ 20, 2020 ಮತ್ತು ಮಾರ್ಚ್ 31, 2022ರ ಅವಧಿಯಲ್ಲಿ ಪ್ರಯಾಣಿಸಿದ 7.31 ಕೋಟಿ ಹಿರಿಯ ನಾಗರಿಕ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಿಲ್ಲ ಎಂಬ ಸಂಗತಿಯೂ RTI ಅರ್ಜಿಯಲ್ಲಿ ಬಹಿರಂಗವಾಗಿದೆ.