
ಅನಾರೋಗ್ಯ ಸೇರಿದಂತೆ ಹಲವು ಸಮಸ್ಯೆಗಳಿಂದ ಈವರೆಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳದ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಹಾಸಿಗೆ ಹಿಡಿದವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಇಂಥವರ ಆಧಾರ್ ಕಾರ್ಡ್ ಮಾಡಲು ಸಿಬ್ಬಂದಿ, ಫಿಂಗರ್ ಪ್ರಿಂಟ್ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಪಡೆಯಲು ಕಿಟ್ ತೆಗೆದುಕೊಂಡು ಮನೆಗೇ ಬರಲಿದ್ದು ಆ ಬಳಿಕ ಆಧಾರ್ ಕಾರ್ಡ್ ತಲುಪಲಿದೆ.
ಈ ಕುರಿತಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಏಪ್ರಿಲ್ 5 ರಂದು ಅಧಿಸೂಚನೆ ಹೊರಡಿಸಿದ್ದು, ಇದು ಈಗಾಗಲೇ ಎಲ್ಲ ಆಧಾರ್ ಕೇಂದ್ರಗಳಿಗೆ ತಲುಪಿಸಲಾಗಿದೆ. ಅಲ್ಲದೆ ತಕ್ಷಣದಿಂದಲೇ ಯೋಜನೆ ಜಾರಿಗೊಳಿಸುವಂತೆ ಆದೇಶಿಸಲಾಗಿದೆ. ಜೊತೆಗೆ ಮನೆಯಲ್ಲಿ ಆಧಾರ್ ಪಡೆಯಲು ಬಯಸುವವರಿಗೆ ಅವರು ಅರ್ಜಿ ಸಲ್ಲಿಸಿದ ವಾರದೊಳಗೆ ಈ ಪ್ರಕ್ರಿಯೆಯನ್ನು ಮುಗಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ.
ಮನೆ ಬಾಗಿಲಲ್ಲಿ ಆಧಾರ್ ಪಡೆಯಬಯಸುವವರು 700 ರೂಪಾಯಿ ಶುಲ್ಕ ಪಾವತಿಸಬೇಕಿದ್ದು, ಇದಕ್ಕಾಗಿ ತಮ್ಮ ವಯಸ್ಸಿನ ಪ್ರಮಾಣ ಪತ್ರ, ವೈದ್ಯರ ದೃಢೀಕರಣ ಪತ್ರ ಹಾಗೂ ಆಧಾರ್ ಅರ್ಜಿಯನ್ನು ಭರ್ತಿ ಮಾಡಿ ಪ್ರಾದೇಶಿಕ ಅಧಿಕಾರಿಗಳಿಗೆ ಇ ಮೇಲ್ ಮೂಲಕ ಮನವಿ ಸಲ್ಲಿಸಬೇಕಿದೆ. ಇದರ ಪರಿಶೀಲನೆ ನಡೆಸಿದ ನಂತರ ವಾರದೊಳಗೆ ಸಿಬ್ಬಂದಿ ಆಧಾರ್ ಕಿಟ್ ತೆಗೆದುಕೊಂಡು ಮನೆಗೆ ಬರಲಿದ್ದು, ಮಾಹಿತಿ ಪಡೆದುಕೊಳ್ಳಲಿದ್ದಾರೆ.