
ಹಿರಿಯ ನಾಗರಿಕರಿಗೆ ಶುಭ ಸುದ್ದಿಯಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಹೆಚ್ಚು ಲಾಭದಾಯಕವಾಗಿಸುವ ಪ್ರಯತ್ನದಲ್ಲಿ ಸರ್ಕಾರವು ಅದರ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಅಕ್ಟೋಬರ್ 1 ರಿಂದ ಪ್ರಾರಂಭವಾಗಿ 2022ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳುವ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪರಿಷ್ಕರಿಸಲಾಗಿದೆ ಅಂತಾ ಆರ್ಥಿಕ ವ್ಯವಹಾರಗಳ ಇಲಾಖೆಯು ಕಚೇರಿಯ ಜ್ಞಾಪಕ ಪತ್ರದಲ್ಲಿ ತಿಳಿಸಿದೆ.
ಹೊಸ ದರಗಳ ಪ್ರಕಾರ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ ಇನ್ಮೇಲೆ ಶೇ.7.6 ರಷ್ಟು ಬಡ್ಡಿ ಸಿಗುತ್ತದೆ. ಹಿಂದಿನ ತ್ರೈಮಾಸಿಕದಲ್ಲಿ ಬಡ್ಡಿದರ ಶೇ.7.4ರಷ್ಟಿತ್ತು. ಸರ್ಕಾರವು 2 ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು 20 ಬಿಪಿಎಸ್‌ನಿಂದ, 5.5 ರಿಂದ 5.7 ಕ್ಕೆ ಮತ್ತು ಮೂರು ವರ್ಷಗಳ ಸಮಯದ ಠೇವಣಿಗಳ ಮೇಲಿನ ಬಡ್ಡಿಯನ್ನು 30 ಬಿಪಿಎಸ್‌ನಿಂದ 5.5 ರಿಂದ 5.8 ಕ್ಕೆ ಹೆಚ್ಚಿಸಿದೆ.
ಮಾಸಿಕ ಆದಾಯ ಖಾತೆ ಯೋಜನೆಯ ಬಡ್ಡಿದರ ಶೇಕಡಾ 6.6ರಷ್ಟಿತ್ತು, ಅದನ್ನು ಶೇ.6.7 ಕ್ಕೆ ಹೆಚ್ಚಿಸಲಾಗಿದೆ. ರೈತರಿಗೆ ಹೆಚ್ಚು ಗಳಿಸಲು ಸಹಾಯವಾಗಲಿ ಎನ್ನುವ ಉದ್ದೇಶದಿಂದ ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿದರವನ್ನು 123 ತಿಂಗಳುಗಳ ಮುಕ್ತಾಯ ಅವಧಿಯೊಂದಿಗೆ ಶೇಕಡಾ 7 ಕ್ಕೆ ಏರಿಕೆ ಮಾಡಲಾಗಿದೆ. ಈ ಹಿಂದೆ ಶೇ.6.9ರಷ್ಟಿದ್ದ ಬಡ್ಡಿದರದೊಂದಿಗೆ 124 ತಿಂಗಳ ಮುಕ್ತಾಯ ಅವಧಿಯಿತ್ತು.
ಮತ್ತೊಂದೆಡೆ, ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ವನ್ ಇಯರ್ ಟೈಮ್ ಡೆಪಾಸಿಟ್, 5 ವರ್ಷಗಳ ರಿಕರಿಂಗ್ ಡೆಪಾಸಿಟ್ ಮೇಲಿನ ಬಡ್ಡಿದರಗಳನ್ನು ಸರ್ಕಾರ ಬದಲಾಯಿಸಿಲ್ಲ. ಹೊಸ ಬಡ್ಡಿ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬಂದಿದ್ದು, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕಕ್ಕೆ ಮಾತ್ರ ಅನ್ವಯವಾಗಲಿದೆ.