ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ವಿಧಿವಶರಾಗಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಬಳಿಕ ಗುಣಮುಖರಾಗಿ ಮನೆಗೆ ತೆರಳಿದ್ದರು. ಆದರೆ ಬಳಿಕ ಮತ್ತೆ ಅಸ್ವಸ್ಥಗೊಂಡಿದ್ದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕನ್ನಡ ಚಿತ್ರರಂಗದಲ್ಲಿ 6 ದಶಕಗಳ ಕಾಲ ಪೋಷಕ ನಟರಾಗಿ, ಹಾಸ್ಯ ನಟರಾಗಿ ಜನಪ್ರಿಯತೆ ಪಡೆದಿರುವ ಎಸ್. ಶಿವರಾಮ್ ಕೇವಲ ನಟನೇ ಮಾತ್ರವಲ್ಲ ನಿರ್ದೇಶಕನಾಗಿ, ನಿರ್ಮಾಪಕನಾಗಿ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ.
ಮದ್ರಾಸ್ ಪ್ರಾಂತ್ಯವಾಗಿದ್ದ ಚೂಡಸಂದ್ರ ಹಳ್ಳಿಯಲ್ಲಿ ಮಧ್ಯಮ ವರ್ಗದ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ 1938ರಲ್ಲಿ ಶಿವರಾಮ್ ಜನಿಸಿದರು. ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ, ಅವರು ಟೈಪ್ ರೈಟಿಂಗ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದ ತಮ್ಮ ಸೋದರನ ಜೊತೆಗೆ ಬೆಂಗಳೂರಿಗೆ ತೆರಳಿದರು.
ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನಗಳ ಪ್ರಭಾವಕ್ಕೆ ಒಳಗಾಗಿ, ಶಿವರಾಮ್ ಚಿತ್ರ ತಯಾರಿಕೆ ಮತ್ತು ನಟನೆಯತ್ತ ಆಸಕ್ತಿ ತಳೆದು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. 1958ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಕು.ರಾ. ಸೀತಾರಾಮಶಾಸ್ತ್ರಿಯವರಂತಹ ವಿವಿಧ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದರು. ಅಲ್ಲದೇ ಅನುಭವಿ ಛಾಯಾಗ್ರಾಹಕ ಬೊಮನ್ ಡಿ ಇರಾನಿ ಅವರಿಗೆ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದ್ದರು.
1965 ರಲ್ಲಿ ಕು.ರಾ. ಸೀತಾರಾಮಶಾಸ್ತ್ರಿ ಅವರ ನಿರ್ದೇಶನದ ಮತ್ತು ಸಹನಿರ್ಮಾಣದ ಕಲ್ಯಾಣ್ ಕುಮಾರ್ ನಾಯಕ ನಟರಾಗಿದ್ದ ’ಬೆರೆತ ಜೀವ’ ಚಿತ್ರದ ಮೂಲಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಏತನ್ಮಧ್ಯೆ, ಅವರು ಕೆ ಎಸ್ ಎಲ್ ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸರಾವ್ ಮತ್ತು ಪುಟ್ಟಣ್ಣ ಕಣಗಾಲ್ ರಂತಹ ಹಲವಾರು ಪ್ರಮುಖ ನಿರ್ದೇಶಕರಿಗೆ ಸಹಾಯಕರಾಗಿದ್ದರು .
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶರಪಂಜರ, ನಾಗರಹಾವು, ಶುಭಮಂಗಳ ಸೇರಿದಂತೆ ಹಲವು ಚಿತ್ರಗಳಲ್ಲಿ ಶಿವರಾಮ್ ಅಭಿನಯ ಅವಿಸ್ಮರಣೀಯ. ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು, ಸಿಂಹದಮರಿ ಸೈನ್ಯ , ಮಕ್ಕಳ ಸೈನ್ಯ ಇಂಥ ಅನೇಕ ಚಲನಚಿತ್ರಗಳಲ್ಲಿ ಅವರ ಹಾಸ್ಯ ಪಾತ್ರಗಳು ಜನರ ಮೆಚ್ಚುಗೆ ಪಡೆದಿವೆ. ಡ್ರೈವರ್ ಹನುಮಂತು, ಬರ ಮತ್ತು ತಾಯಿ ಸಾಹೇಬ, ಆಪ್ತಮಿತ್ರ, ಹುಚ್ಚ ಮೊದಲಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು.
ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಗೃಹಭಂಗ ಟೆಲಿವಿಷನ್ ಧಾರಾವಾಹಿಯಲ್ಲೂ ಮತ್ತು ರವಿಕಿರಣ್ ನಿರ್ದೇಶಿಸಿದ ಬದುಕು ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ,
ಸಹೋದರ ಎಸ್ ರಾಮನಾಥನ್ ಜತೆಗೂಡಿ “ರಾಶಿ ಬ್ರದರ್ಸ್” ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು(1980) ಗಳಂತಹ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದರು.