ಶಿಮ್ಲಾ: ಕೊರೆಯುವ ಚಳಿಯಲ್ಲಿ ವಾಕಿಂಗ್ ಹೋಗುವುದಕ್ಕೆ ಅನೇಕ ಮಂದಿ ಕಷ್ಟಪಡುತ್ತಾರೆ. ಬೆಚ್ಚಗೆ ಮನೆಯಲ್ಲಿ ಮಲಗಲು ಇಷ್ಟಪಡುವವರೇ ಹೆಚ್ಚು. ಥರಗುಟ್ಟುವಂತಹ ಚಳಿಯಲ್ಲಿ ದೇಶ ಕಾಯುವ ಸೈನಿಕರು ಕಬ್ಬಡ್ಡಿ ಆಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ದಟ್ಟ ಹಿಮದ ಮಧ್ಯೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧರು ಕಬ್ಬಡ್ಡಿ ಪಂದ್ಯವನ್ನು ಆಡಿದ್ದಾರೆ.
ಅಂದಾಜು 12,500 ಅಡಿ ಎತ್ತರದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಪ್ಯಾಡ್ಡ್ ಜಾಕೆಟ್‌ಗಳು ಮತ್ತು ಬೂಟುಗಳನ್ನು ಧರಿಸಿದ್ದ ಯೋಧರು ಕಬ್ಬಡ್ಡಿ ಆಡುವ ವಿಡಿಯೋ ವೈರಲ್ ಆಗಿದೆ.
ಟ್ವಿಟ್ಟರ್ ನಲ್ಲಿ ಐಟಿಬಿಪಿ ವಿಡಿಯೋವನ್ನು ಹಂಚಿಕೊಂಡಿದೆ. ಐಟಿಬಿಪಿ ಯೋಧರನ್ನು ಹಿಮವೀರರು ಅಂತಾ ಕೂಡ ಕರೆಯಲಾಗುತ್ತದೆ. ಸೈನಿಕರು ಒಬ್ಬರನ್ನೊಬ್ಬರು ಗೆಲ್ಲಲು ಹೋರಾಡಿದ್ದಾರೆ.
ಕೆಲವು ವಾರಗಳ ಹಿಂದೆ, ಐಟಿಬಿಪಿ ಯೋಧರು -20 ಡಿಗ್ರಿ ಸೆಲ್ಸಿಯಸ್ ಹವಾಮಾನದಲ್ಲಿ ಭಾರತ-ಚೀನಾ ಗಡಿಯಲ್ಲಿ 15,000 ಅಡಿ ಎತ್ತರದಲ್ಲಿ ವಾಲಿಬಾಲ್ ಪಂದ್ಯ ಆಡಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.
ಹಿಮಾಚಲದಲ್ಲಿರುವ ಐಟಿಬಿಪಿ ಸಿಬ್ಬಂದಿ ಮೈನಸ್ 20 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 14,000 ಅಡಿ ಎತ್ತರದಲ್ಲಿ ಗಡಿಗಳಲ್ಲಿ ಗಸ್ತು ತಿರುಗಬೇಕಾಗುತ್ತದೆ. ಅವರು ತಮ್ಮ ದೈಹಿಕ ತರಬೇತಿ ಮತ್ತು ಇತರ ಚಟುವಟಿಕೆಗಳನ್ನು ಹಿಮದಲ್ಲಿ ಮಾಡುತ್ತಾರೆ. ಸೈನಿಕರು ಮಾನಸಿಕ ಹಾಗೂ ದೈಹಿಕವಾಗಿ ಗಟ್ಟಿಯಾಗಿರುವ ನಿಟ್ಟಿನಲ್ಲಿ ಇಂತಹ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.