ಬೆಂಗಳೂರು: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭವಾಗಿದ್ದು, ಸರ್ಕಾರದ ಪರ ಪ್ರತಿವಾದ ಮಂಡಿಸುತ್ತಿರುವ ಎಜಿ ಪ್ರಭುಲಿಂಗ ನಾವದಗಿ ಹಿಜಾಬ್ ಇಸ್ಲಾಂ ನ ಅತ್ಯಗತ್ಯ ಆಚರಣೆಯಲ್ಲ, ಹಿಜಾಬ್ ನಿರ್ಬಂಧ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆಯಾಗುವುದಿಲ್ಲ ಎಂಬುದು ಸರ್ಕಾರದ ನಿಲುವು ಎಂದಿದ್ದಾರೆ.
ಹಿಜಾಬ್ ಅತ್ಯಗತ್ಯವೇ? ವೈಯಕ್ತಿಕವಾಗಿ ಗೌರವಯುತವೇ? ಸಂವಿಧಾನದ ಅಡಿ ನೈತಿಕವಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಶಬರಿ ಮಲೆ, ಶಾಯಿರಾ ಬಾನು ಕೇಸ್ ನ ಆಧಾರದಲ್ಲಿ ನಿರ್ಧರಿಸಬೇಕು. ಸರ್ಕಾರದ ಆದೇಶದ ಹಿಂದಿನ ಉದ್ದೇಶವೇನು? ಎಂದು ಸಿಜೆ ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿದ್ದಾರೆ. 2013ರಲ್ಲೇ ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರದ ಬಗ್ಗೆ ನಿರ್ಣಯ ಅಂಗೀಕರಿಸಿದೆ. ಉಡುಪಿಯ ಕಾಲೇಜಿನ ಅಭಿವೃದ್ಧಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆಯೇ? ಎಂದು ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದ್ದಾರೆ. ಇದಕ್ಕೆ ಎಜಿ ಉತ್ತರಿಸಿದ್ದು, ಉಡುಪಿ ಪಿಯು ಕಾಲೇಜು ವಿದ್ಯಾರ್ಥಿನಿಯರ ಕಾಲೇಜಾಗಿದ್ದು, ಕಾಲೇಜು ಅಭಿವೃದ್ಧಿ ಸಮಿತಿಗೆ ಕಾನೂನು ಮಾನ್ಯತೆ ಇದೆ. ಶಾಲಾ ಅಭಿವೃದ್ಧಿ ಸಮಿತಿಯಲ್ಲಿ ಹಲವು ಗಣ್ಯ ವ್ಯಕ್ತಿಗಳಿರುತ್ತಾರೆ. ಶಾಸಕರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಪಂಗಡಗಳ ಸದಸ್ಯರು ಇರುತ್ತಾರೆ. 2018ರಲ್ಲಿ ಹೆಣ್ಣುಮಕ್ಕಳಿಗೆ ಸಮವಸ್ತ್ರ ಸಂಹಿತೆ ರೂಪಿಸಲಾಗಿದೆ. ಡಿಸೆಂಬರ್ 2021ವರೆಗೆ ಕಾಲೇಜಿನಲ್ಲಿ ಸಮಸ್ಯೆ ಇರಲಿಲ್ಲ. ಬಳಿಕ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದಾಗಿ ಪ್ರಿನ್ಸಿಪಾಲ್ ಅವರಿಗೆ ಮನವಿ ಮಾಡಿದ್ದಾರೆ. ಜನವರಿ 1ರಂದು ಕಾಲೇಜು ಅಭಿವೃದ್ಧಿ ಸಮಿತಿ ಸಭೆ ನಡೆಸಿ, ಹಿಜಾಬ್ ಗೆ ಅವಕಾಶವಿಲ್ಲ 1985ರ ನಿಯಮದ ಪ್ರಕಾರ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಕಾಲೇಜಿನಲ್ಲಿ ಶಿಸ್ತು, ಸಮಾನತೆ ಇರಬೇಕು ಎಂಬ ಉದ್ದೇಶಕ್ಕೆ ಸಮವಸ್ತ್ರ ಸಂಹಿತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಯಿತು ಎಂದು ವಾದ ಮಂಡಿಸಿದ್ದಾರೆ.
ಹೀಗಾಗಿ ಹಾಲಿ ಇರುವ ಸಮವಸ್ತ್ರ ಸಂಹಿತೆ ಬಗ್ಗೆ ಪರಾಮರ್ಶೆಗೆ ಉನ್ನತ ಮಟ್ಟದ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿತು. ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು. ನಂತರ ಕಾಲೇಜು ಅಭಿವೃದ್ಧಿ ಸಮಿತಿ ಮತ್ತೊಂದು ನಿರ್ಣಯ ಅಂಗೀಕರಿಸಿತು. ಹಿಂದೆ ಇದ್ದಂತೆಯೇ ಸಮವಸ್ತ್ರ ಸಂಹಿತೆ ಮುಂದುವರೆಸಲು ನಿರ್ಧರಿಸಲಾಯಿತು. ಸರ್ಕಾರ ಈ ಬಗ್ಗೆ ಆದೇಶ ಹೊರಡಿಸುವ ಮೊದಲೇ ರಿಟ್ ಸಲ್ಲಿಸಲಾಯಿತು. ರಿಟ್ ಅರ್ಜಿ ಸಲ್ಲಿಕೆಯಾದರೂ ಕಾಲೇಜಿನಲ್ಲಿ ಪ್ರತಿಭಟನೆ ಆರಂಭವಾಗಿ ಉಡುಪಿ ಕಾಲೇಜಿನ ವಿವಾದ ರಾಜ್ಯಾವ್ಯಾಪಿ ವಿಸ್ತರಿಸಿತು. ಹೀಗಾಗಿ ಫೆ.5ರಂದು ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯ ಆದೇಶ ಹೊರಡಿಸಬೇಕಾಯಿತು. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕು ಎಂದು ವಾದ ಮಂಡಿಸಿದರು.