ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿ ಹಾಜ್ರಾ ಶಿಫಾ ಪೋಷಕರ ಹೋಟೆಲ್ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೇ ಶಿಫಾ ಸಹೋದರನ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳು ಸ್ಟೇಷನ್ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಹೋಟೆಲ್ ಮೇಲೆ ಕಲ್ಲು ಎಸೆದಿದ್ದ ಮಲ್ಪೆಯ ಮಂಜು ಸಾಲಿಯನ್ ಅಲಿಯಾಸ್ ಮನೋಜ್, ದೀಪಕ್ ಸಾಲಿಯಾನ್ ಹಾಗೂ ಸನಿಲ್ ರಾಜ್ ಎಂಬವರನ್ನು ಮಲ್ಪೆ ಠಾಣಾ ಪೊಲೀಸರು ನಿನ್ನೆ ಬಂಧಿಸಿದ್ದರು.
ಮಲ್ಪೆಯಲ್ಲಿರುವ ಬಿಸ್ಮಿಲ್ಲಾ ಹೋಟೆಲ್ಗೆ ನುಗ್ಗಿದ್ದ ಗುಂಪೊಂದು ಹೋಟೆಲ್ನ ಕಿಟಕಿ ಗಾಜುಗಳನ್ನು ಒಡೆದಿದ್ದು ಮಾತ್ರವಲ್ಲದೇ ವಿದ್ಯಾರ್ಥಿನಿ ಶಿಫಾಳ ಸಹೋದರ ಸೈಫ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಸೈಫ್ರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಈ ಘಟನೆ ಸಂಬಂಧ ಟ್ವೀಟಾಯಿಸಿದ್ದ ವಿದ್ಯಾರ್ಥಿನಿ ಶಿಫಾ, ಹಿಜಾಬ್ ಪರವಾಗಿ ಹೋರಾಟ ನಡೆಸಿದ್ದಕ್ಕೆ ದುಷ್ಕರ್ಮಿಗಳು ನನ್ನ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಹೋಟೆಲ್ ಧ್ವಂಸಗೊಳಿಸಿದ್ದಾರೆ. ನಮ್ಮ ಹಕ್ಕಿಗಾಗಿ ನಾವು ಧ್ವನಿ ಎತ್ತುವುದು ತಪ್ಪೇ..? ಸಂಘಪರಿವಾರಗಳ ಈ ಗೂಂಡಾಗಿರಿಯ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟಾಯಿಸಿದ್ದರು.