ಹೈದರಾಬಾದ್: ಹೊಸ ಕೋನಸೀಮಾ ಜಿಲ್ಲೆಗೆ ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಸಚಿವರ ಮನೆಗೆ ಬೆಂಕಿ ಹಚ್ಚಿದ ನಂತರ ಆಂಧ್ರಪ್ರದೇಶದ ಅಮಲಾಪುರಂ ಪಟ್ಟಣದಲ್ಲಿ ಹಿಂಸಾಚಾರ ತೀವ್ರಗೊಂಡಿದೆ.
ಗಲಭೆ ವೇಳೆ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸ್ ವಾಹನ ಮತ್ತು ಶಿಕ್ಷಣ ಸಂಸ್ಥೆಯ ಬಸ್‌ಗೂ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪಟ್ಟಣದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸಚಿವ ಪಿ ವಿಶ್ವರೂಪ್ ಮತ್ತು ಕುಟುಂಬವನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ವಿಶ್ವರೂಪ್ ಅವರ ಮನೆ ಮಾತ್ರ ಗುರಿಯಾಗಿರಲಿಲ್ಲ. ಕೋನಸೀಮಾ ಜಿಲ್ಲೆಯಲ್ಲಿ ಶಾಸಕ ಪೊನ್ನಡ ಸತೀಶ್ ಅವರ ಮನೆಗೂ ಬೆಂಕಿ ಹಚ್ಚಲಾಗಿದೆ.
”ಕೋನಸೀಮ ಜಿಲ್ಲೆಯನ್ನು ಅಂಬೇಡ್ಕರ್ ಕೋನಸೀಮ ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ಸ್ಥಳೀಯ ಜನರು ಹಾಗೂ ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಂಬೇಡ್ಕರ್ ಕೋನಸೀಮ ಜಿಲ್ಲೆಗೆ ಮರುನಾಮಕರಣ ಮಾಡಲಾಯಿತು. ಮತ್ತು ಅಂತಹ ಮಹಾನ್ ವ್ಯಕ್ತಿಯ ಹೆಸರನ್ನು ಜಿಲ್ಲೆಗೆ ನಾಮಕರಣ ಮಾಡುವುದನ್ನು ವಿರೋಧಿಸುವುದು ನೋವಿನ ಸಂಗತಿ” ಎಂದು ಆಂಧ್ರಪ್ರದೇಶದ ಗೃಹ ಸಚಿವ ತನೇತಿ ವನಿತಾ ಹೇಳಿದ್ದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಜನರ ಇಚ್ಛೆಯ ಮೇರೆಗೆ ಜಿಲ್ಲೆಯ ಹೆಸರನ್ನು ಬದಲಾಯಿಸಲಾಗಿದೆ, ಆದರೆ ಕೆಲವರು ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರತಿಭಟನೆ ಆರಂಭಿಸಿದ ಸಂಚುಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.