ಕೊರೊನಾ ಲಾಕ್ಡೌನ್ ಬಡವರ ಜೀವನಕ್ಕೆ ಮುಳ್ಳಾಗಿ ಪರಿಣಮಿಸಿತ್ತು. ಜೀವನ ನಿರ್ವಹಣೆಯೇ ಕಷ್ಟಕರವಾಗಿರುವ ಈ ಸಂದರ್ಭದಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳನ್ನು ನಡೆಸುವುದು ದೂರದ ಮಾತಾಗಿತ್ತು. ಈ ರೀತಿ ಮಗಳ ಮದುವೆ ನಡೆಸಲು ಪರದಾಡುತ್ತಿದ್ದ ಹಿಂದೂ ಮಹಿಳೆಗೆ ಮುಸ್ಲಿಂ ಕುಟುಂಬವೊಂದು ನೆರವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಈ ಘಟನೆ ನಡೆದಿದ್ದು, ಶಕ್ತಿನಗರದ ನಿವಾಸಿ ಗೀತಾ ಎಂಬವರು ಕೆಲ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು. 1 ವರ್ಷದ ಹಿಂದೆ ಹಿರಿಯ ಮಗಳ ಮದುವೆ ಮಾಡಿದ್ದ ಅವರು ಇದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದರು.
ಇದಕ್ಕಾಗಿ ಮನೆಯಲ್ಲಿದ್ದ ಕೆಲವು ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಿದ್ದು, ಇದರ ಮಧ್ಯೆ ಕಿರಿಯ ಮಗಳಿಗೂ ಮದುವೆ ನಿಶ್ಚಯವಾಗಿದೆ. ಈ ಸಂದರ್ಭದಲ್ಲಿ ಗೀತಾ ಅವರು ಕಂಗಾಲಾಗಿದ್ದು, ಕಿರಿಯ ಮಗಳ ಮದುವೆ ಹೇಗೆ ಮಾಡುವುದು ಎಂಬ ಚಿಂತೆಯಲ್ಲಿದ್ದರು.
ಆದರೆ ಈ ವಿಷಯ ತಿಳಿದ ಉಳ್ಳಾಳ ಅಲೇಕಳದ ಎಂಕೆ ಕುಟುಂಬದ ಹಂಝ ಮದುವೆ ಮಾಡಿಸುವ ಭರವಸೆ ನೀಡಿದ್ದು, ಅದರಂತೆ ಶನಿವಾರದಂದು ತಮ್ಮ ಮನೆಯಲ್ಲೇ ಮೆಹಂದಿ ಶಾಸ್ತ್ರ ನೆರವೇರಿಸಿದ್ದಾರೆ. ಭಾನುವಾರದಂದು ತಲಪಾಡಿ ದೇವಿಪುರದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೀತಾ ಅವರ ಮಗಳ ಮದುವೆ ನಡೆದಿದ್ದು ಇದಕ್ಕೆ ಅಗತ್ಯ ನೆರವನ್ನೂ ಹಂಝ ಕುಟುಂಬ ನೀಡಿದೆ.