ವಡೋದರಾ ಮೂಲದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯವು ತನ್ನ ಲಲಿತ ಕಲಾ ವಿಭಾಗದ ವಸ್ತು ಪ್ರದರ್ಶನ ಕಾರ್ಯಕ್ರಮದ ಬಳಿಕ ವಿವಾದದ ಕೇಂದ್ರ ಬಿಂದುವಾಗಿದೆ. ಈ ವಿಭಾಗದ ಕೆಲವು ವಿದ್ಯಾರ್ಥಿಗಳು ಹಿಂದು ದೇವರ ಆಕ್ಷೇಪಾರ್ಹ ಭಾವಚಿತ್ರಗಳನ್ನು ಪ್ರದರ್ಶಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆರ್ಎಸ್ಎಸ್ ಹಾಗೂ ಎಬಿವಿಪಿ ಸಂಘಟನೆಗಳು ಇದನ್ನು ವಿರೋಧಿಸಿದ್ದು ಡೀನ್ ರಾಜೀನಾಮೆಗೆ ಆಗ್ರಹಿಸಿವೆ.
ಲಲಿತ ಕಲಾ ವಿಭಾಗದ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಕಲಾಕೃತಿಗಳನ್ನು ಸಿದ್ಧಪಡಿಸಿದ್ದರು. ಆದರೆ ಇವುಗಳಲ್ಲಿ ಕೆಲವು ಕಲಾಕೃತಿಗಳು ಆಕ್ರೋಶಕ್ಕೆ ಕಾರಣವಾಗಿವೆ. ಕೆಲವು ವಿದ್ಯಾರ್ಥಿಗಳು ಹಿಂದೂ ದೇವತೆಗಳ ಚಿತ್ರಗಳನ್ನು ಫ್ರೇಮ್ನ ಒಳಗೆ ಬಿಡಿಸಿದ್ದರೆ ಇನ್ನೂ ಕೆಲವರು ದೇವರ ನಗ್ನ ಚಿತ್ರಗಳನ್ನು ರಚಿಸಿದ್ದಾರೆ. ಫ್ರೇಮ್ನ ಒಳಗೆ ಪೇಪರ್ ಕಟ್ಟಿಂಗ್ನಿಂದ ದೇವರ ಆಕೃತಿಯನ್ನು ರಚಿಸಲಾಗಿತ್ತು. ಇದಕ್ಕೆ ಬಳಕೆ ಮಾಡಲಾದ ಪತ್ರಿಕೆಗಳು ಅತ್ಯಾಚಾರದ ಸುದ್ದಿಗಳನ್ನು ಒಳಗೊಂಡಿದ್ದವು.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಎಬಿವಿಪಿ ಕಾರ್ಯಕರ್ತರು ಡೀನ್ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಈ ಕೃತ್ಯ ಎಸಗಿದ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಎಬಿವಿಪಿ ಕಾರ್ಯಕರ್ತರು ಡೀನ್ ಹಾಗೂ ಉಪಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.