ಹಿಂದೂಗಳ ಹೊಸ ವರ್ಷಾರಂಭವಾಗ್ತಿದೆ. ಯುಗಾದಿ ಮತ್ತೆ ಬಂದಿದೆ. ಯುಗಾದಿ ಹಬ್ಬವನ್ನು ಹಿಂದೂಗಳು ಅದ್ರಲ್ಲೂ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ನಂತ್ರ ಹೊಸ ವರ್ಷ ಶುರುವಾಗುತ್ತದೆ. ಹೊಸ ವರ್ಷವನ್ನು ಜನರು ಸಂಪ್ರದಾಯದಂತೆ ಬರಮಾಡಿಕೊಳ್ತಾರೆ. ಸೂರ್ಯ ನಮಸ್ಕಾರ, ಪಂಚಾಂಗ ಪೂಜೆ ಹಾಗೂ ಬೇವು-ಬೆಲ್ಲವನ್ನು ತಿಂದು ಹಬ್ಬ ಆಚರಿಸಲಾಗುತ್ತದೆ.
ಮನೆಯನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಮನೆಯನ್ನು ಅಲಂಕಾರ ಮಾಡಲಾಗುತ್ತದೆ. ಮಾವಿನ ಎಲೆ, ಬೇವಿನ ಎಲೆ ಹಾಗೂ ಹೂವನ್ನು ಮನೆಯ ಮುಂಭಾಗ ಹಾಗೂ ದೇವರ ಮನೆಗೆ ಕಟ್ಟಲಾಗುತ್ತದೆ. ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ, ಅಭ್ಯಂಜನ ಸ್ನಾನ ಮಾಡುತ್ತಾರೆ ಜನರು.
ನಂತ್ರ ಸಂಪ್ರದಾಯಸ್ಥ ಜನರು ಕಳಶದ ನೀರನ್ನು ಮಾವಿನ ಎಲೆ ಮೂಲಕ ಮನೆಗೆಲ್ಲ ಸಿಂಪಡಣೆ ಮಾಡುತ್ತಾರೆ. ಹೊಸ ಬಟ್ಟೆ ತೊಡುತ್ತಾರೆ. ನಂತ್ರ ಮನೆಯ ಹಿರಿಯ ಸದಸ್ಯ ಹಿಂದೂ ಪಂಚಾಂಗವನ್ನು ಎಲ್ಲರ ಮುಂದೆ ಓದುತ್ತಾರೆ. ಆದ್ರೆ ಈ ಪದ್ಧತಿ ಮಾಸುತ್ತ ಬಂದಿದೆ.
ಮನೆಯನ್ನು ಅಲಂಕರಿಸಿ, ಹೊಸ ಬಟ್ಟೆ ತೊಟ್ಟು ಜನರು ದೇವಸ್ಥಾನಕ್ಕೆ ಹೋಗ್ತಾರೆ. ಮನೆಯಲ್ಲಿ ಬೇವು-ಬೆಲ್ಲ ಮಾಡಿ ಎಲ್ಲರಿಗೂ ನೀಡ್ತಾರೆ. ಹೋಳಿಗೆ ಊಟ ಮಾಡಿ ಸಂಭ್ರಮದಿಂದ ಹಬ್ಬವನ್ನು ಆಚರಿಸ್ತಾರೆ. ಯುಗಾದಿಯಂದು ಕಷ್ಟದ ಸಂಕೇತ ಬೇವನ್ನೂ ಸುಖದ ಸಂಕೇತ ಬೆಲ್ಲವನ್ನೂ ಸಮನಾಗಿ ತಿನ್ನುವ ಪದ್ಧತಿಯಿದೆ.