ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿ ಹಿಂದಿ ಬ್ಯಾನರ್ ಹಾಕಿದ್ದಕ್ಕೆ ಪ್ರತಿಪಕ್ಷಗಳ ನಾಯಕರ ಜೊತೆಗೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತ ಇಲಾಖೆ ಅದನ್ನು ತೆಗೆದು ಹಾಕಿತ್ತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈ ಕುರಿತು ಟ್ವೀಟ್ ಮಾಡಿ ಕನ್ನಡ ಮತ್ತು ಸಂಸ್ಕೃತಿನ ಇಲಾಖೆಗೆ ಚಾಟಿ ಬೀಸಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಕೇಂದ್ರ ಬಿಜೆಪಿ ನಾಯಕರ ಓಲೈಕೆಗಾಗಿ ಮತ್ತೆ ಮತ್ತೆ ಕನ್ನಡವನ್ನು ತುಳಿದು ಹಿಂದಿಯನ್ನು ಮೆರೆಸಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದ್ದರು.
ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ತಪ್ಪು ತಿದ್ದಿಕೊಂಡಿರುವ ಹಿನ್ನಲೆಯಲ್ಲಿ ಮತ್ತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಾನು ಚಾಟಿ ಬೀಸಿದ ನಂತರ ಸರ್ಕಾರ ಎಚ್ಚೆತ್ತುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿ ಅನಗತ್ಯವಾಗಿ ತುರುಕಿದ್ದ ಹಿಂದಿಯನ್ನು ಕಿತ್ತೊಗೆದಿದೆ. ರಾಜ್ಯ ಬಿಜೆಪಿ ನಾಯಕರೇ, ನಾನೊಬ್ಬ ಕನ್ನಡಿಗ ಎಂಬ ಸ್ವಾಭಿಮಾನವನ್ನು ನೀವೇ ಬೆಳೆಸಿಕೊಳ್ಳಬೇಕು, ಇದು ನಾವು ಹೇಳಿ ಬರುವಂತದ್ದಲ್ಲ. ಹಿಂದಿ ರಾಷ್ಟ್ರಭಾಷೆ ಎಂಬ ಭ್ರಮೆಯಿಂದ ಹೊರಬನ್ನಿ ಎಂದಿದ್ದಾರೆ.