ಎಲ್ಲವೂ ಇದ್ದರೂ ಕೆಲವರಿಗೆ ಹಿಂಜರಿಕೆ. ಯಾರಾದರೂ ಏನಾದರು ಅಂದು ಕೊಂಡಾರು ಎಂಬ ಸಣ್ಣ ಭಯ ಕಾಡುತ್ತದೆ. ಹಿಂಜರಿಕೆಯೇ ಹಿಂದುಳಿಯಲು ಕಾರಣ ಎಂಬುದು ನಿಮಗೆ ನೆನಪಿರಲಿ. ಎಲ್ಲದಕ್ಕೂ ಬೇರೆಯವರ ಸಹಾಯ ಪಡೆಯದೇ ನಿಮ್ಮ ವಿಶ್ವಾಸ ನೀವೇ ಹೆಚ್ಚಿಸಿಕೊಳ್ಳಿ.
ಕೆಲವರಿಗೆ ತಾವು ಬೆಳೆದು ಬಂದ ಪರಿಸರ, ಹಿನ್ನಲೆ ಎಲ್ಲಕ್ಕಿಂತ ಮುಖ್ಯವಾಗಿ ಅವರ ಮನಃಸ್ಥಿತಿಯೇ ಅವರಲ್ಲಿ ಹಿಂಜರಿಕೆ ಉಂಟು ಮಾಡುತ್ತದೆ. ಇನ್ನೊಬ್ಬರ ಮೇಲೆ ಅವಲಂಬನೆಯಾಗುತ್ತಾರೆ. ಯಾವುದೇ ಕೆಲಸ ಕಾರ್ಯಗಳಿದ್ದರೂ ಡಿಪೆಂಡ್ ಆಗುತ್ತಾರೆ.
ಅದು ಒಂದು ಹಂತದವರೆಗೆ ನಿಮ್ಮನ್ನು ರಕ್ಷಿಸಿದಂತೆ ಕಂಡರೂ, ನೀವೇ ಅದರಿಂದ ಹಿನ್ನಡೆ ಅನುಭವಿಸಬೇಕಾಗುತ್ತದೆ. ಅದರ ಬದಲಿಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.
ಬೇರೆಯವರೊಂದಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳದೆ ನಿಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಿ. ಹೊಸ ಬಗೆಯ ಆಲೋಚನೆ, ಸ್ವತಂತ್ರ ನಿರ್ಧಾರ ನಿಮ್ಮನ್ನು ಬದಲಿಸುತ್ತದೆ. ಕೆಲಸದ ಸ್ಥಳಗಳಲ್ಲಿ ನಿಮ್ಮ ನಿರ್ಧಾರ ಮುಖ್ಯವಾಗುತ್ತದೆ.
ನಿಮ್ಮ ಬುದ್ಧಿವಂತಿಕೆ ಬಳಕೆಯಾಗಲಿ. ಅದು ನನ್ನಿಂದ ಸಾಧ್ಯವಿಲ್ಲ ಎಂಬ ಭಾವನೆಯನ್ನು ಹೊರ ಹಾಕಿ ನಿಮಗೆ ನೀವೇ ಮಾರ್ಗದರ್ಶಕರಾಗಬಹುದು. ಎಲ್ಲದಕ್ಕೂ ಬೇರೆಯವರ ಸಲಹೆ ಪಡೆಯದೇ ಸ್ವಂತ ತೀರ್ಮಾನ ಕೈಗೊಳ್ಳಿ.
ತಪ್ಪಾದ ನಿರ್ಧಾರ ನಿಮ್ಮನ್ನು ಇನ್ನಷ್ಟು ಕುಗ್ಗಿಸುತ್ತದೆ. ನೀವು ಕೈಗೊಳ್ಳುವ ನಿರ್ಧಾರದ ಪರಿಣಾಮಗಳೇನು ಎಂಬುದು ನಿಮಗೆ ತಿಳಿದಿರಲಿ.
ಸಮಸ್ಯೆಯಾದ ಮೇಲೆ ಒದ್ದಾಡುವುದಕ್ಕಿಂತ ಸಮಸ್ಯೆಯೇ ಬರದಂತೆ ನೋಡಿಕೊಳ್ಳುವುದು ಉತ್ತಮ. ನಿಮ್ಮ ಆತ್ಮವಿಶ್ವಾಸವೇ ನಿಮಗೆ ಮಾರ್ಗದರ್ಶಿಯಾಗಲಿ.