ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕೆಂಬ ವಿಚಾರ ಜೆಡಿಎಸ್ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಕ್ಷೇತ್ರದಿಂದ ಕಣಕ್ಕಿಳಿಯಲು ಎಚ್.ಡಿ. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಎಚ್.ಪಿ. ಸ್ವರೂಪ್ ಪ್ರಬಲ ಆಕಾಂಕ್ಷಿಗಳಾಗಿದ್ದು, ಟಿಕೆಟ್ ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.
ವಿಧಾನಸಭಾ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪಂಚ ರತ್ನ ರಥಯಾತ್ರೆ ನಡೆಸುತ್ತಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತಂತೆ ಮೌನಕ್ಕೆ ಶರಣಾಗಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರೊಂದಿಗೆ ಚರ್ಚಿಸಿದ ಬಳಿಕ ಈ ಕ್ಷೇತ್ರದ ಟಿಕೆಟ್ ಫೈನಲ್ ಆಗಲಿದೆ.
ಇದರ ಮಧ್ಯೆ ಅಭ್ಯರ್ಥಿ ಘೋಷಣೆಯಾಗದಿದ್ದರೂ ಸಹ ಭವಾನಿ ರೇವಣ್ಣ ಹಾಗೂ ಎಚ್.ಪಿ. ಸ್ವರೂಪ್ ಹಾಸನ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈವರೆಗೆ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದ ಸ್ವರೂಪ್ ಈಗ ನಗರದಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಜೆಡಿಎಸ್ ಗೆ ಮತ ನೀಡಿ ಎಂದು ಹೇಳುತ್ತಿದ್ದಾರೆ ಹೊರತು ತಮಗೆ ನೀಡಿ ಎಂದು ಕೇಳುತ್ತಿಲ್ಲ.
ಇನ್ನು ಭವಾನಿ ರೇವಣ್ಣನವರು ಕೂಡ ಹಾಸನ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದು, ಇದರ ಜೊತೆಗೆ ಬಿಜೆಪಿ ಮುಖಂಡರನ್ನು ಸಹ ಜೆಡಿಎಸ್ ಗೆ ಕರೆ ತರುವ ಪ್ರಯತ್ನ ನಡೆಸಿದ್ದಾರೆ. ಇಬ್ಬರೂ ಆಕಾಂಕ್ಷಿಗಳು ತಮಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಅಂತಿಮವಾಗಿ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.