ಹಾವೇರಿಯಲ್ಲಿ ಜನವರಿ 6, 7 ಮತ್ತು 8ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಅದ್ದೂರಿ ಸಿದ್ಧತೆ ನಡೆದಿದೆ. ಹಾವೇರಿ ನಗರದ ರಸ್ತೆಗಳು ರಾತ್ರಿಯಲ್ಲಿ ಜಗಮಗಿಸುತ್ತಿದ್ದು, ದಸರಾ ಉತ್ಸವವನ್ನು ನೆನಪಿಸುವಂತಿದೆ.
ಹಾಗೆಯೇ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಮೂರು ದಿನಗಳ ಕಾಲವೂ ವಿವಿಧ ಬಗೆಯ ಭಕ್ಷ್ಯಗಳು ಉಣ ಬಡಿಸಲಿದ್ದು ಈಗಾಗಲೇ ಇದಕ್ಕೆ ತಯಾರಿ ನಡೆಯುತ್ತಿದೆ.
ಮೊದಲ ದಿನ ಬೆಳಗಿನ ಉಪಹಾರಕ್ಕೆ ಶಿರಾ, ಉಪ್ಪಿಟ್ಟು ಹಾಗೂ ಬೆಲ್ಲದ ಚಹಾ ನೀಡಲಿದ್ದು, ಮಧ್ಯಾಹ್ನದ ಊಟಕ್ಕೆ ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯ, ಚಪಾತಿ, ಅನ್ನ – ಸಾಂಬಾರ್, ಶೇಂಗಾ ಚಟ್ನಿ, ಮೊಸರು ನೀಡಲಾಗುತ್ತದೆ. ರಾತ್ರಿ ಊಟಕ್ಕೆ ಹೆಸರುಬೇಳೆ ಪಾಯಸ, ಪುಳಿಯೋಗರೆ, ಅನ್ನ – ಸಾಂಬಾರ್ ಹಾಗೂ ಉಪ್ಪಿನಕಾಯಿ ನೀಡಲಾಗುತ್ತದೆ.
ಇನ್ನು ಎರಡನೇ ದಿನದಂದು ಬೆಳಗಿನ ಉಪಹಾರಕ್ಕೆ ರವೆ ಉಂಡೆ, ವೆಜಿಟೇಬಲ್ ಪಲಾವ್, ಬೆಲ್ಲದ ಚಹಾ, ಮಧ್ಯಾಹ್ನದ ಊಟಕ್ಕೆ ಲಡಕಿ ಪಾಕ್, ಮಿಕ್ಸ್ ವೆಜಿಟೇಬಲ್, ಚಪಾತಿ, ಅನ್ನ – ಸಾಂಬಾರ್, ಶೇಂಗಾ ಚಟ್ನಿ ಹಾಗೂ ಮೊಸರು ನೀಡಲಾಗುತ್ತದೆ. ಹಾಗೆ ರಾತ್ರಿ ಊಟಕ್ಕೆ ಶಾವಿಗೆ ಪಾಯಸ, ಬಿಸಿಬೇಳೆ ಬಾತ್, ಅನ್ನ – ಸಾಂಬಾರ್ ಹಾಗೂ ಉಪ್ಪಿನಕಾಯಿ ನೀಡಲಾಗುತ್ತದೆ.
ಇನ್ನು ಸಮ್ಮೇಳನದ ಅಂತಿಮ ದಿನದಂದು ಬೆಳಗಿನ ಉಪಹಾರಕ್ಕೆ ಮೈಸೂರುಪಾಕ್, ವಾಂಗಿಬಾತ್, ಬೆಲ್ಲದ ಚಹಾ, ಮಧ್ಯಾಹ್ನದ ಊಟಕ್ಕೆ ಮೋತಿಚೂರು ಲಡ್ಡು, ಕಾಳಪಲ್ಯ, ಚಪಾತಿ, ಅನ್ನ – ಸಾಂಬಾರ್, ಬಿರಂಜಿ ಅನ್ನ, ಉಪ್ಪಿನಕಾಯಿ, ಶೇಂಗಾ ಚಟ್ನಿ, ಮೊಸರು ಹಾಗೂ ರಾತ್ರಿ ಊಟಕ್ಕೆ ಗೋಧಿ ಹುಗ್ಗಿ, ಚಿತ್ರಾನ್ನ, ಅನ್ನ – ಸಾಂಬಾರ್ ಹಾಗೂ ಉಪ್ಪಿನಕಾಯಿ ನೀಡಲಾಗುತ್ತದೆ.