ಹಾವುಗಳಂದ್ರೆ ಒಂದು ರೀತಿಯ ಕುತೂಹಲ ಮತ್ತು ಭಯ ಎರಡೂ ನಮ್ಮಲ್ಲಿದೆ. ಹಾವುಗಳನ್ನು ಸಾಕುವವರ ಬಗ್ಗೆ ನೀವೂ ಕೇಳಿರಬಹುದು. ಹಾವು ಸಾಕಾಣಿಕೆ ಭಾರತದಲ್ಲಿ ಬಹಳ ವಿರಳ. ಆದ್ರೆ ವಿದೇಶಗಳಲ್ಲಿ ಈ ಹವ್ಯಾಸ ಸಾಕಷ್ಟಿದೆ. ಕೇವಲ ಹವ್ಯಾಸಕ್ಕಾಗಿ ಮಾತ್ರವಲ್ಲ ಹಾವು ಸಾಕಣೆಯಿಂದ ಕೋಟ್ಯಾಂತರ ರೂಪಾಯಿ ಆದಾಯವನ್ನೂ ಗಳಿಸ್ತಾರೆ.
ಕೋಳಿ, ಮೀನು ಸಾಕಣೆ ಮಾಡುವ ರೀತಿಯಲ್ಲಿ ಹಾವುಗಳನ್ನು ಸಹ ವ್ಯಾಪಾರದ ಉದ್ದೇಶಕ್ಕಾಗಿ ಸಾಕಲಾಗುತ್ತದೆ. ಹಾವುಗಳ ವಿಷವನ್ನು ಹೊರತೆಗೆಯುವ ಉದ್ದೇಶದಿಂದ ಸಾಕಲಾಗುತ್ತದೆ. ಹಾವುಗಳ ವಿಷ ಕೋಟಿಗಟ್ಟಲೆ ಬೆಲೆಬಾಳುತ್ತದೆ. ಹಲವು ದೇಶಗಳಲ್ಲಿ ಹಾವುಗಳನ್ನು ಸಾಕುವುದು ಕಾನೂನು ಬಾಹಿರವಾಗಿದ್ದರೂ ಚೀನಾದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಚೀನಾದ ಜನರು ಹಾವುಗಳನ್ನು ಸಾಕುತ್ತಾರೆ ಮತ್ತು ಅದರ ವಿಷದಿಂದ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಹಾವಿನ ವಿಷಕ್ಕೆ ಪ್ರಪಂಚದಾದ್ಯಂತ ಬೇಡಿಕೆಯಿದೆ. ಏಕೆಂದರೆ ಹಾವಿನ ವಿಷವನ್ನು ವಿವಿಧ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ.
ಆದಾಗ್ಯೂ ಈ ವ್ಯವಹಾರದಲ್ಲಿ ಅಪಾಯ ಹೆಚ್ಚು. ಒಂದು ಲೀಟರ್ ಹಾವಿನ ವಿಷದ ಬೆಲೆ ಜಾಗತಿಕವಾಗಿ ಕೋಟಿಗಳಲ್ಲಿ ಇರಬಹುದು.ಜಾಗತಿಕ ಮಾರುಕಟ್ಟೆಯಲ್ಲಿ ಹಾವಿನ ವಿಷಕ್ಕೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಹಾವು ಸಾಕಣೆ ವ್ಯವಹಾರವು ಬಹಳ ಲಾಭದಾಯಕವಾಗಿದೆ. ಆದರೆ ಹಾವು ಸಾಕುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ, ಆದ್ದರಿಂದ ಪೂರೈಕೆಯಲ್ಲೂ ಕೊರತೆಯಿದೆ. ಚೀನಾದ ಜಿಸಿಕಿಯಾವೊ ಎಂಬ ಪುಟ್ಟ ಗ್ರಾಮವು ಹಾವು ಸಾಕಣೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಗ್ರಾಮಸ್ಥರು ಹಾವು ಸಾಕಣೆಯಿಂದ ಮಾತ್ರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇಲ್ಲಿನ ವಾರ್ಷಿಕ ವಹಿವಾಟು ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.