ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ರಾಜಮೌಳಿ ನಿರ್ದೇಶನದ ಆರ್ ಆರ್ ಆರ್, ಬಾಹುಬಲಿ ಮೊದಲಾದವುಗಳು ಬಾಲಿವುಡ್ ಚಿತ್ರಗಳಿಗೂ ಸೆಡ್ಡು ಹೊಡೆದು ಗಳಿಕೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿವೆ.
ಈ ಮೊದಲು ದಕ್ಷಿಣ ಭಾರತ ಚಿತ್ರಗಳಲ್ಲಿ ಕಾಣಿಸಿಕೊಂಡವರು ಬಾಲಿವುಡ್ ಚಿತ್ರಗಳಲ್ಲಿ ಅವಕಾಶ ಪಡೆದುಕೊಳ್ಳಲು ಹಾತೊರೆಯುತ್ತಿದ್ದರು. ಬಾಲಿವುಡ್ ನಲ್ಲಿ ಯಶಸ್ಸು ಸಾಧಿಸಿದ ಬಳಿಕ ಅವರ ಮುಂದಿನ ಕನಸು ಹಾಲಿವುಡ್ ಚಿತ್ರರಂಗವಾಗಿತ್ತು. ಆದರೆ ಇದೀಗ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿರುವ ವಿಷಯ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತ ಚಿತ್ರಗಳಿಗೆ ಎಷ್ಟು ಮಹತ್ವವಿದೆ ಎಂಬುದನ್ನು ಬಿಂಬಿಸುತ್ತಿದೆ.
ಸಲ್ಮಾನ್ ಖಾನ್, ಚಿರಂಜೀವಿ ಅಭಿನಯದ ‘ಗಾಡ್ ಫಾದರ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ, ಬಹುತೇಕ ನಟ – ನಟಿಯರು ಹಾಲಿವುಡ್ ಗೆ ಹೋಗಲು ಬಯಸುತ್ತಾರೆ. ಆದರೆ ನಾನು ದಕ್ಷಿಣ ಭಾರತ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗಗಳ ಪ್ರತಿಭೆಗಳ ಸಮಾಗಮವಾದರೆ 300 ರಿಂದ 400 ಕೋಟಿ ಬದಲು 3,000 – 4,000 ಕೋಟಿ ರೂಪಾಯಿ ಆದಾಯ ಸಂಗ್ರಹಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.