ಭಾರತದ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ ವಿಧಿವಶರಾಗಿದ್ದಾರೆ. 92ನೇ ವಯಸ್ಸಿನಲ್ಲಿ ಗಾನ ಕೋಗಿಲೆ ಇಂದು ತಮ್ಮ ಹಾಡು ನಿಲ್ಲಿಸಿದ್ದು, ಇಡೀ ದೇಶವೇ ಕಂಬನಿ ಮಿಡಿದಿದೆ.
ಲತಾ ಮಂಗೇಶ್ಕರ್ ಭಾರತದ 36 ಭಾಷೆಗಳಲ್ಲಿ ಹಾಗೂ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಸಾವಿರಕ್ಕೂ ಹೆಚ್ಚು ಬಾಲಿವುಡ್ ಸಿನಿಮಾಗಳಿಗೆ ಧ್ವನಿಯಾಗಿದ್ದರು. ಅವರ ಹಾಡುಗಳಿಗೆ, ಧ್ವನಿಗೆ ಮನಸೋಲದವರೇ ಇಲ್ಲ. ಗಾಯನದ ಮೂಲಕವೇ ಮೋಡಿ ಮಾಡಿದ್ದ ಲತಾ ಮಂಗೇಶ್ಕರ್ ಅವರನ್ನು ಅಭಿಮಾನಿಗಳು ಬಾಲಿವುಡ್ ನೈಟಿಂಗೇಲ್, ಕ್ವೀನ್ ಆಫ್ ದಿ ಮೆಲೋಡಿ, ವಾಯ್ಸ್ ಆಫ್ ದಿ ದೇಶನ್ ಎಂಬ ವಿಶಿಷ್ಠ ಹೆಸರುಗಳಿಂದ ಕರೆಯುತ್ತಿದ್ದರು.
ಸೆ. 28, 1929ರಲ್ಲಿ ಮಧ್ಯಪ್ರದೇಶದ ಇಂದೋರ್ ನಲ್ಲಿ ಜನಿಸಿದ್ದ ಲತಾ ಮಂಗೇಶ್ಕರ್ ಅವರ ತಂದೆ ದೀನಾನಾಥ್ ಮಂಗೇಶ್ಕರ್, ತಾಯಿ ಸೇವಂತಿ ಮಂಗೇಶ್ಕರ್. ಲತಾ ಅವರ ಮೊದಲ ಹೆಸರು ಹೇಮಾ. ಚಿಕ್ಕಂದಿನಲ್ಲಿಯೇ ನಾಟಕಗಳಲ್ಲಿಯೂ ಅಭಿನಯಿಸಿದ್ದ ಲತಾ 13 ವರ್ಷದಲ್ಲಿಯೇ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ, ತಮ್ಮ ಹಾಡಿನ ಮೂಲಕ ಜನಪ್ರಿಯತೆ ಪಡೆದರು.
ತಂದೆ ದೀನನಾಥ್ ಮಂಗೇಶ್ಕರ್ ಅವರೇ ಲತಾ ಮಂಗೇಶ್ಕರ್ ಅವರ ಸಂಗೀತ ಗುರು. 13ನೇ ವಯಸ್ಸಿನಲ್ಲಿ ಮರಾಠಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಗಾಯಕಿಯಾಗಿ ಕಾಲಿಟ್ಟರು. 1943ರಲ್ಲಿ ಮರಾಠಿ ಚಿತ್ರದಲ್ಲಿ ಮೊದಲ ಬಾರಿ ಹಿಂದಿ ಹಾಡಿಗೆ ಧ್ವನಿಯಾದರು. 1945ರಲ್ಲಿ ಮುಂಬೈಗೆ ತೆರಳಿದ ಲತಾ ಉಸ್ತಾದ್ ಅಮನ್ ಅಲಿ ಖಾನ್ ಅವರ ಗರಡಿಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕೆ ಆರಂಭಿಸಿದರು. ಇದರ ಜತೆ ಹಿಂದಿ ಚಿತ್ರಗಳಲ್ಲೂ ಹಾಡಲಾರಂಭಿಸಿದರು.
ಸಂಗೀತ ಕ್ಷೇತ್ರದ ಲತಾ ಮಂಗೇಶ್ಕರ್ ಸಾಧನೆಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಹಾಡಿದ ಭಾರತದ ಮೊದಲ ಗಾಯಕಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 15 ಬೆಂಗಾಲ್ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ಫಿಲ್ಮ್ ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ, ಎರಡು ಫಿಲ್ಮ್ ಫೇರ್ ವಿಶೇಷ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
1989ರಲ್ಲಿ ಭಾರತ ಸರ್ಕಾರದಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2001ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ, ಫ್ರಾನ್ಸ್ ಸರ್ಕಾರದಿಂದ 2007ರಲ್ಲಿ ಆಫೀಸರ್ ಆಫ್ ದಿ ಲೀಜನ್ ಆಫ್ ಆನರ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
92 ವರ್ಷದ ಲತಾ ಮಂಗೇಶ್ಕರ್ ಕೆಲದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರೂ, ಚಿಕಿತ್ಸೆ ಬಳಿಕ ಗುಣಮುಖರಾಗಿದ್ದ ಅವರು ಮೂರು ದಿನಗಳಿಂದ ಮತ್ತೆ ಅನಾರೋಗ್ಯಕ್ಕೀಡಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದು, ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.