ಎಸ್.ಪಿ. ಬಾಲಸುಬ್ರಮಣ್ಯ ವಿಧಿವಶರಾಗಿ ನಾಳೆಗೆ ಎರಡು ವರ್ಷ ತುಂಬಲಿದೆ. 2020 ರ ಸೆಪ್ಟೆಂಬರ್ 25 ರಂದು ಅವರು ಇಹಲೋಕ ತ್ಯಜಿಸಿದ್ದು, ಅವರ ಸ್ಮರಣಾರ್ಥ ಈ ವಿಶೇಷ ಲೇಖನ.
ಎಸ್.ಪಿ. ಬಾಲಸುಬ್ರಮಣ್ಯಂ ದೇಶಕಂಡ ಅಪ್ರತಿಮ ಗಾಯಕ. ಸ್ನೇಹಿತರು ಅವರನ್ನು ಪ್ರೀತಿಯಿಂದ ಬಾಲು ಎಂದೇ ಕರೆಯುತ್ತಿದ್ರು. 1966ರಲ್ಲಿ ಗಾಯನ ಕ್ಷೇತ್ರಕ್ಕೆ ಕಾಲಿಟ್ಟ ಎಸ್‌ಪಿಬಿ ಅವರ ಸುಮಧುರ ಕಂಠದಿಂದ 40,000ಕ್ಕೂ ಹೆಚ್ಚು ಹಾಡುಗಳು ಹೊರಹೊಮ್ಮಿವೆ. ಸುಮಾರು 16 ಭಾಷೆಗಳಲ್ಲಿ ಅವರು ಹಾಡಿದ್ದಾರೆ.
1946ರ ಜೂನ್ 4ರಂದು ಎಸ್‌ಪಿಬಿ ಜನನವಾಯ್ತು. ಸಂಗೀತವನ್ನೇ ಮೈದುಂಬಿಕೊಂಡಿದ್ದ ಅವರು ಕೇವಲ ಗಾಯನಕ್ಕೆ ಮಾತ್ರ ತಮ್ಮನ್ನು ಸೀಮಿತವಾಗಿಟ್ಟುಕೊಂಡಿರಲಿಲ್ಲ. ಸಂಗೀತ ನಿರ್ದೇಶಕರಾಗಿ, ನಟರಾಗಿ, ಡಬ್ಬಿಂಗ್ ಕಲಾವಿದರಾಗಿ, ಸಿನೆಮಾ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಚಿತ್ರರಂಗಕ್ಕೆ ಬಾಲಸುಬ್ರಮಣ್ಯಂ ಅವರ ಕೊಡುಗೆ ಅಪಾರ. 1966ರಲ್ಲಿ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಎಂಬ ತೆಲಗು ಸಿನೆಮಾದಿಂದ ಎಸ್‌ಪಿಬಿ ಅವರ ಗಾನಸುಧೆಯ ಪರಿಚಯ ಸಂಗೀತ ಪ್ರಿಯರಿಗಾಗಿತ್ತು.
ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕ ಎಸ್‌ಪಿಬಿ, ಅವರ ಹೆಸರು ಗಿನ್ನಿಸ್ ದಾಖಲೆಯ ಪುಟವನ್ನೂ ಸೇರಿದೆ. ಅತ್ಯುತ್ತಮ ಗಾಯಕನಾಗಿ ಗುರುತಿಸಿಕೊಂಡ ಬಾಲು 6 ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. 25 ಬಾರಿ ಆಂಧ್ರಪ್ರದೇಶ ಸರ್ಕಾರ ಕೊಡಮಾಡುವ ನಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದೇ ರೀತಿ ತಮಿಳುನಾಡು, ಕರ್ನಾಟಕದಲ್ಲೂ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
6 ಫಿಲ್ಮ್ ಫೇರ್ ಪ್ರಶಸ್ತಿಗಳು ಎಸ್‌ಪಿಬಿಗೆ ಸಂದಿವೆ. 2001ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಯ್ತು. 2011ರಲ್ಲಿ ಪದ್ಮಭೂಷಣ ಗೌರವ ಅವರನ್ನು ಅರಸಿ ಬಂದಿತ್ತು. ಇಂತಹ ಸಿರಿ ಕಂಠದ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ 2020ರ ಸೆಪ್ಟೆಂಬರ್ 25ರಂದು ನಮ್ಮನ್ನು ಅಗಲಿದ್ದಾರೆ. ಕೋವಿಡ್‌ನಿಂದ ಚೇತರಿಸಿಕೊಂಡಿದ್ದರು ಉಸಿರಾಟದ ತೊಂದರೆಯಿಂದಾಗಿ ಅವರು ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾದರು.