ಚಪಾತಿ, ಪೂರಿ ಮಾಡಿದಾಗ ಮಾಮೂಲಿ ಅದೇ ಸಾಂಬಾರು, ಗೊಜ್ಜು ಮಾಡುತ್ತಿರುತ್ತೇವೆ. ಒಮ್ಮೆ ಈ ಹಸಿ ಬಟಾಣಿ ಉಪಯೋಗಿಸಿ ರುಚಿಕರವಾದ ಸಾರು ಮಾಡಿ ನೋಡಿ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿ: ಹಸಿ ಬಟಾಣಿ ಕಾಳು ½ ಕಪ್ ತೆಗೆದುಕೊಳ್ಳಿ, ಈರುಳ್ಳಿ 1 ಹದ ಗಾತ್ರದ್ದು, ಶಂಠಿ-ಕಾಲು ಇಂಚು, ಬೆಳ್ಳುಳ್ಳಿ-3 ಎಸಳು, ಟೊಮೆಟೊ-1, ಆಲೂಗಡ್ಡೆ-1, ಧನಿಯಾ ಪುಡಿ-1/4 ಚಮಚ, ಜೀರಿಗೆ 1 ಟೀ ಸ್ಪೂನ್, ಗರಂ ಮಸಾಲಾ-1 ಟೀ ಸ್ಪೂನ್, ಅರಿಶಿಣ ಚಿಟಿಕೆ, ಹಸಿಮೆಣಸು-2, ಸ್ವಲ್ಪ ಕರೀಬೇವು, ಇಂಗು ಚಿಟಿಕೆ, ಎಣ್ಣೆ-1 ಟೇಬಲ್ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು.
ಮೊದಲು ಒಂದು ಮಿಕ್ಸಿ ಜಾರಿಗೆ ಹಸಿ ಬಟಾಣಿ ಕಾಳುಗಳನ್ನು ಹಾಕಿ ಅದನ್ನು ತರಿಕತರಿಯಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ. ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಜೀರಿಗೆ ಧನಿಯಾ ಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಆಲೂಗಡ್ಡೆಯನ್ನು ಹುರಿದಿಟ್ಟುಕೊಳ್ಳಿ.
ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಇಂಗು ಹಾಕಿ. ನಂತರ ಇದಕ್ಕೆ ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಆಮೇಲೆ ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ. ಕುದಿಯುತ್ತಿರುವಾಗ ಚಿಟಿಕೆ ಅರಿಶಿಣ, ಉಪ್ಪು, ಗರಂ ಮಸಾಲಾ ಹಾಕಿ. ಆಮೇಲೆ ಹದ ನೋಡಿಕೊಂಡು ನೀರು ಸೇರಿಸಿ. ಇದು ಕುದಿಯಲು ಆರಂಭಿಸಿದಾಗ ಹುರಿದಿಟ್ಟುಕೊಂಡ ಆಲೂಗಡ್ಡೆ ಸೇರಿಸಿ 10 ನಿಮಿಷ ಕುದಿಸಿದರೆ ಹಸಿ ಬಟಾಣಿ ಸಾರು ರೆಡಿ. ಇದು ದೋಸೆ, ಚಪಾತಿ, ಪೂರಿ, ಬಿಸಿ ಅನ್ನದ ಜತೆ ಚೆನ್ನಾಗಿರುತ್ತದೆ.