ಈರುಳ್ಳಿ ಬಹುತೇಕ ಎಲ್ಲರೂ ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಪ್ರತಿನಿತ್ಯದ ಅಡುಗೆಗಳಿಂದ ಹಿಡಿದು, ಸ್ಪೆಷಲ್ ತಿನಿಸುಗಳು, ಚಾಟ್ಸ್ ಎಲ್ಲದಕ್ಕೂ ಈರುಳ್ಳಿ ಬೇಕೇ ಬೇಕು. ಈರುಳ್ಳಿ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಆದ್ರೆ ಅದನ್ನು ಅತಿಯಾಗಿ ಸೇವನೆ ಮಾಡಿದ್ರೆ ಹಾನಿ ತಪ್ಪಿದ್ದಲ್ಲ.
ಈರುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾಕೆಂದರೆ ಈರುಳ್ಳಿಯಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಅಂಶ ಅಧಿಕವಾಗಿರುತ್ತದೆ. ಇದರ ಜೊತೆಗೆ ನಾರಿನಂಶವೂ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಈರುಳ್ಳಿ ಕೆಲವರಿಗೆ ಸರಿಯಾಗಿ ಜೀರ್ಣವಾಗುವುದಿಲ್ಲ. ಹಾಗಾದಾಗ ಆಸಿಡಿಟಿ ಸಮಸ್ಯೆ ಕಾಡಬಹುದು.
ಸಕ್ಕರೆ ಕಾಯಿಲೆ ಇರುವವರು ಅಥವಾ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವ ರೋಗಿಗಳು ಈರುಳ್ಳಿ ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಯಾಕೆಂದರೆ ಹಸಿ ಈರುಳ್ಳಿ ಇವರಿಗೆ ಹೆಚ್ಚು ಪ್ರಯೋಜನಕಾರಿಯಲ್ಲ. ಮಧುಮೇಹ ರೋಗಿಗಳಂತೂ ಎಲ್ಲಾ ಆಹಾರ ಪದಾರ್ಥಗಳನ್ನು ಬಹಳ ಎಚ್ಚರಿಕೆಯಿಂದ ಸೇವಿಸಬೇಕು. ವೈದ್ಯರ ಸಲಹೆ ಪಡೆದ ಬಳಿಕವೇ ಹಸಿ ಈರುಳ್ಳಿಯನ್ನು ಸೇವನೆ ಮಾಡಿ.
ಹಸಿ ಈರುಳ್ಳಿಯನ್ನು ಅತಿಯಾಗಿ ತಿಂತಾ ಇದ್ರೆ ನೀವು ಎಚ್ಚೆತ್ತುಕೊಳ್ಳುವುದು ಒಳಿತು. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಎದೆಯುರಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಹಸಿ ಈರುಳ್ಳಿ ಇಷ್ಟ ಅಂತಾದ್ರೆ ಸ್ವಲ್ಪವೇ ಸೇವನೆ ಮಾಡಿ. ಇನ್ನು ಹಸಿ ಈರುಳ್ಳಿಯಿಂದಾಗುವ ಕಾಮನ್ ಸಮಸ್ಯೆ ಎಂದರೆ ಬಾಯಿಯ ದುರ್ವಾಸನೆ. ಹಸಿ ಈರುಳ್ಳಿ ತಿಂದ ನಂತರ ಬಾಯಿಯಿಂದ ಗಬ್ಬು ವಾಸನೆ ಬರುತ್ತದೆ. ಹಾಗಾಗಿ ಊಟದ ನಂತರ ಬ್ರಷ್ ಮಾಡಿ ಜೊತೆಗೆ ಸ್ವಲ್ಪ ಸೋಂಪಿನ ಕಾಳುಗಳನ್ನು ಬಾಯಲ್ಲಿ ಹಾಕಿಕೊಂಡು ಅಗಿಯಿರಿ. ಇದರಿಂದ ವಾಸನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.