ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಕವಲೇದುರ್ಗ ಹಸಿರು ಸಿರಿಯಿಂದ ಕೂಡಿದ ಮೋಹಕ ತಾಣವಾಗಿದೆ.
ತೀರ್ಥಹಳ್ಳಿ ಹೊಸನಗರ ರಸ್ತೆಯ ನೊಣಬೂರುವರೆಗೆ ರಸ್ತೆ ಸೌಲಭ್ಯವಿದ್ದು, ಅಲ್ಲಿಂದ ನಡೆದು ಹೋಗಬೇಕು. ಕೆಳದಿ ಅರಸರ ಅಭೇದ್ಯ ರಕ್ಷಣಾ ತಾಣವಾಗಿದ್ದ ಕವಲೇದುರ್ಗದಲ್ಲಿ ಸ್ಮಾರಕಗಳಿವೆ.
ಹಿಂದೆ ಕಾವಲುದುರ್ಗ ಎಂದು ಕರೆಯಲ್ಪಡುತ್ತಿದ್ದ ಕವಲೇದುರ್ಗ ಚಾರಣ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಮಗನಿಗೆ ಕವಲೇದುರ್ಗ ಸಂಸ್ಥಾನ ಆಶ್ರಯ ನೀಡಿತ್ತು ಎನ್ನಲಾಗಿದೆ. 3 ಸುತ್ತಿನ ಕೋಟೆ ಇದಾಗಿದ್ದು, ಬೆಟ್ಟ, ಗುಡ್ಡಗಳ ನೈಸರ್ಗಿಕತೆ ಜೊತೆಗೆ ಕಲ್ಲುಗಳನ್ನು ಜೋಡಿಸಿ ಕೋಟೆ ಕಟ್ಟಲಾಗಿದೆ.
ಮಹಾದ್ವಾರಗಳು, ರಕ್ಷಣಾ ಕೊಠಡಿಗಳು ಇವೆ. ಶ್ರೀಕಂಠೇಶ್ವರ ದೇವಾಲಯವಿದೆ. ನಂದಿ ಮಂಟಪ, ಮುಖ ಮಂಟಪಗಳಿದ್ದು, ಸಂಜೆಯ ವೇಳೆ ಸೂರ್ಯ ಮುಳುಗುವ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಕೋಟೆಯ ಒಳಭಾಗದಲ್ಲಿನ ಅರಮನೆಯ ಪ್ರದೇಶದಲ್ಲಿ ಅಡಿಪಾಯ ಕಾಣುತ್ತದೆ. ಕೊಠಡಿಗಳು, ವಿಶಾಲ ಜಗುಲಿ, ಅಡುಗೆ ಕೋಣೆ, ನೀರು ಸರಬರಾಜು ವ್ಯವಸ್ಥೆ ಮೊದಲಾದವು ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಉತ್ಖನನದ ಸಂದರ್ಭದಲ್ಲಿ ಕಂಡುಬಂದಿವೆ.
ಪ್ರಶಾಂತ ಪರಿಸರದಿಂದ ಕೂಡಿರುವ ಕವಲೇದುರ್ಗದಲ್ಲಿ ಹಸಿರನ್ನು ಕಣ್ತುಂಬಿಕೊಳ್ಳುವುದೇ ಮನಸ್ಸಿಗೆ ಮುದ ನೀಡುತ್ತದೆ. ಕೆರೆ, ಮಠ, 7 ಹೆಡೆಯ ಏಕಶಿಲಾ ನಾಗರ ಶಿಲ್ಪಗಳು, ಕೊಳ ಮೊದಲಾದವುಗಳನ್ನು ನೋಡಬಹುದಾಗಿದೆ. ಮಾಹಿತಿ ಪಡೆದುಕೊಂಡು ಒಮ್ಮೆ ಹೋಗಿ ಬನ್ನಿ.