ಗೋವನ್ನ ಸುಮ್ಮನೆ ಕಾಮಧೇನು ಅನ್ನುವುದಿಲ್ಲ. ಈಗಿನ ಕಾಲದಲ್ಲಿ ಮನುಷ್ಯನಲ್ಲಿ ಮಾನವೀಯತೆ ಕಾಣೆಯಾಗಿದ್ರು, ಪ್ರಾಣಿಗಳಲ್ಲಿ ಅದು ಕಾಣಿಸುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆಯೆ ಈ ಗೋವಿನ ಕಥೆ. ಕರ್ನಾಟಕ ಯಾದಗಿರಿಯ ಅಮ್ಮಾಪುರ ಗ್ರಾಮದಲ್ಲಿ ಹಸುವೊಂದು ಹಸಿದ ನಾಯಿಮರಿಗಳಿಗೆ ಹಾಲುಣಿಸುತ್ತಿದೆ. ಇದೇ ಗ್ರಾಮದಲ್ಲಿ ಬೀದಿನಾಯಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಆದರೆ ಈ ತಾಯಿ ಶ್ವಾನ ತೀರಾ ಬಡಕಲಾಗಿದ್ದು, ಅಪೌಷ್ಟಿಕತೆಗೆ ಒಳಗಾಗಿದೆ. ಸಿಗುವ ಅಷ್ಟು ಇಷ್ಟು ಊಟವನ್ನ ತಿಂದುಕೊಂಡು ಬದುಕಿರುವ ತಾಯಿ ಶ್ವಾನದ ಕೆಚ್ಚಲಿನಿಂದ ನಾಯಿಮರಿಗಳ ಹೊಟ್ಟೆ ತುಂಬುತ್ತಿಲ್ಲ.
ಹಸುವಿನ ಮಾಲೀಕ ಕನಕಪ್ಪ ಕಟ್ಟಿಮನಿ ಹೇಳುವಂತೆ ಇತ್ತೀಚೆಗೆ ಕರುವಿಗೆ ಜನ್ಮ ನೀಡಿರುವ ಹಸು, ಐದು ದಿನಗಳ ಹಿಂದೆ ತಾನಾಗೆ ನಾಯಿಮರಿಗಳಿಗೆ ಹಾಲುಣಿಸಿದೆ. ಅಂದಿನಿಂದ ನಾಯಿಮರಿಗಳು ಹೊಟ್ಟೆತುಂಬಾ ಹಾಲು ಕುಡಿಯುತ್ತಿವೆ. ಅಂದಿನಿಂದ ಹಸುವಿನ ಬಳಿ ತಾವೇ ಹೋಗಿ ನಾಯಿಮರುಗಳು ಹಾಲು ಕುಡಿಯುತ್ತಿದ್ದು, ಗೋಮಾತೆಯು ಮರಿಗಳು ಹಾಲು ಕುಡಿದು ಮುಗಿಯವವರೆಗು ಶಾಂತವಾಗಿರುತ್ತದೆ. ಅಲ್ಲದೇ ಹಸು ತಾನಾಗೆ ಗ್ರಾಮದ ವಾಲ್ಮೀಕಿ ವೃತ್ತದ ಬಳಿ ಹೋಗಿ ಪ್ರತಿದಿನ ಎರಡು ಬಾರಿ ನಾಯಿಮರಿಗಳಿಗೆ ಹಾಲುಣಿಸುತ್ತಿದೆಯಂತೆ. ಆ ಜಾಗದಲ್ಲಿ ನಾಯಿ ಮರಿಗಳಿರದಿದ್ದರೆ ಹಸು ಸೀದಾ ತನ್ನ ಮನೆಗೆ ಬರುತ್ತದೆ, ಆಗ ನಾಯಿಮರಿಗಳು ಹಸುವನ್ನ ಹುಡುಕಿಕೊಂಡು ಬಂದು ಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತವೆ ಎಂದು ಕನಕಪ್ಪ ಹೇಳಿದ್ದಾರೆ.
ಗ್ರಾಮದ ಹಿರಿಯ ಮಲ್ಲಿಕಾರ್ಜುನ ರೆಡ್ಡಿಯವರು ಈ ಬಗ್ಗೆ ಮಾತನಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಸು ಮತ್ತು ನಾಯಿ ಮರಿಗಳ ನಡುವಿನ ಬಾಂಧವ್ಯ ಈಗ ತಾಯಿ-ಮಕ್ಕಳಂತೆ ಆಗಿದೆ. ನಾಯಿಮರಿಗಳು ಎಲ್ಲಿರುತ್ತವೆ ಎಂದು ಹಸುವಿಗೆ ತಿಳಿದಿರುತ್ತದೆ. ಹಸು ಎಲ್ಲಿದೆ ಎಂದು ನಾಯಿಮರಿಗಳಿಗೆ ಗೊತ್ತಿರುತ್ತದೆ. ಈ ಘಟನೆ ನಮ್ಮೆಲ್ಲರಿಗು ಪಾಠವಿದ್ದಂತೆ ಎಂದಿದ್ದಾರೆ.