ಮಕ್ಕಳಿಗೆ ಖಾರ ಖಾರದ ತಿನಿಸು, ಕರಿದ ತಿನಿಸುಗಳ ಮೇಲೆ ಆಕರ್ಷಣೆ ಸಹಜ. ಆದರೆ ಈ ರೀತಿಯಾದ ಆಹಾರಗಳು ಆರೋಗ್ಯಕ್ಕೆ ಹಾನಿಕರ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮನೆಯಲ್ಲೇ ಇಷ್ಟವಾಗುವ ರೀತಿ ಹುಳಿ, ಖಾರ ಮಿಶ್ರಿತ ಸಾರು ತಯಾರಿಸಿ ತುಪ್ಪದ ಅನ್ನದ ಜೊತೆ ಕೊಟ್ಟು ನೋಡಿ. ಮನೆ ಊಟ ಅಂದ್ರೆ ಮೂಗು ಮುರಿಯುವ ಮಕ್ಕಳು ಕೂಡ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಹಳ್ಳಿ ಮನೆಯ ಒಲೆಗಳಲ್ಲಿ ಅಜ್ಜಿ ಮಾಡುತ್ತಿದ್ದ ಹುಣಸೇ ಗೊಡ್ಡು ಸಾರು! ಬಾಯಲ್ಲಿ ನೀರೂರಿಸುವುದಲ್ಲದೇ ಜೀರ್ಣಕ್ರಿಯೆಗೂ ಸಹಕಾರಿ. ಹಾಗಾದ್ರೆ ಹುಣಸೇ ಗೊಡ್ಡು ಸಾರು ಮಾಡೋದು ಹೇಗೆ ನೋಡೋಣ ಬನ್ನಿ.
ಮೊದಲಿಗೆ ಒಂದು ಬಟ್ಟಲಿಗೆ ನೀರು ಹಾಕಿ ಹುಣಸೇ ಹಣ್ಣನ್ನು ನೆನೆಹಾಕಿ.
ಈಗ ಸ್ಟೌ ಆನ್ ಮಾಡಿ, ಒಂದು ಕಡಾಯಿ ಇಟ್ಟು ಒಂದು ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ.
ಎಣ್ಣೆ ಕಾದ ಬಳಿಕ ಸಾಸಿವೆ, ಜೀರಿಗೆ ಹಾಕಿ ಬಾಡಿಸಿಕೊಳ್ಳಿ. ಆ ನಂತರ ಸ್ವಲ್ಪ ಕರಿಬೇವು, ಕೆಂಪು ಮೆಣಸಿನಕಾಯಿ ಹಾಕಿ ಬಾಡಿಸಿಕೊಳ್ಳಿ.
ಇಳಿಬಿದ್ದ ತ್ವಚೆಯನ್ನು ಲಿಫ್ಟ್ ಮಾಡುತ್ತೆ ಈ ʼಫೇಸ್ ಪ್ಯಾಕ್ʼ
ಒಗ್ಗರಣೆ ಸಿದ್ಧವಾದ ನಂತರ ಇದಕ್ಕೆ ನೆನೆಸಿಟ್ಟುಕೊಂಡಿದ್ದ ಹುಣಸೇ ರಸವನ್ನು ಹಾಕಿ ಸ್ವಲ್ಪ ಕುದಿಸಿಕೊಳ್ಳಿ.
2 ನಿಮಿಷದ ಬಳಿಕ ಸ್ವಲ್ಪ ನೀರು ಸೇರಿಸಿ ಮತ್ತೊಮ್ಮೆ ಕುದಿಸಿಕೊಳ್ಳಿ. ಸಾಂಬರಿನ ಗಟ್ಟಿಯ ಆಧಾರದ ಮೇಲೆ ನೀರನ್ನು ಅಳತೆ ಮಾಡಿಕೊಳ್ಳಬೇಕು.
5 ನಿಮಿಷಗಳ ಬಳಿಕ ಸಾಂಬಾರು ಪುಡಿ ಹಾಕಿ ಮಿಕ್ಸ್ ಮಾಡಿ. ಖಾರ, ಹುಳಿಯ ಜೊತೆ ರುಚಿಗೆ ಉಪ್ಪನ್ನು ಹಾಕಿ ಚೆನ್ನಾಗಿ ಹೊಂದುವಂತೆ 10 ನಿಮಿಷ ಕುದಿಸಿ.
ಹುಣಸೇ ಮತ್ತು ಖಾರ ಹದವಾಗಿ ಬೆರೆತರೆ ಹುಣಸೇ ಗೊಡ್ಡು ಸಾರು ಸವಿಯಲು ಸಿದ್ಧ. ಬಿಸಿ ಬಿಸಿ ಅನ್ನದೊಂದಿಗೆ ಒಂದು ಸ್ಪೂನ್ ತುಪ್ಪ ಸೇರಿಸಿ ಈ ಸಾರು ಹಾಕಿಕೊಟ್ಟರೆ ಮಕ್ಕಳು ಇಷ್ಟಪಟ್ಟು ತಿನ್ನುವುದು ಗ್ಯಾರಂಟಿ. ಯಾಕಂದ್ರೆ ಇದು ಅಜ್ಜಿಯ ರೆಸಿಪಿ.