ಪಾಟ್ನಾ: ಬಿಹಾರದಲ್ಲಿ ಪಂಚಾಯತ್ ಚುನಾವಣೆ ಸಮೀಪಿಸಿರುವುದರಿಂದ, ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಜನರಿಗೆ ಹಲವಾರು ಭರವಸೆ, ಪ್ರಣಾಳಿಕೆಗಳನ್ನು ಕೂಡ ಬಿಡುಗಡೆ ಮಾಡುತ್ತಿದ್ದಾರೆ.
ಈ ನಡುವೆ ಮುಜಾಫರ್‌ಪುರದ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಂತಿರುವ ತುಫೈಲ್ ಅಹ್ಮದ್ ಎಂಬುವವರು ವಿಭಿನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಪೋಸ್ಟರ್‌ನ ಘೋಷ ವಾಕ್ಯವೂ ವಿಭಿನ್ನವಾಗಿದೆ. ಘೋಷವಾಕ್ಯವೆಂದರೆ- “ನೀವು ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ, ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದುತ್ತಾರೆ” ಎಂದು ಬರೆಯಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಹುದ್ದೆಗೆ ಉತ್ತಮ ಅಭ್ಯರ್ಥಿ, ವಿದ್ಯಾವಂತ ಮತ್ತು ಯುವಕ ತುಫೈಲ್ ಅಹ್ಮದ್ ಎಂದು ಬರೆಯಲಾಗಿದೆ.
ಗ್ರಾಮದಲ್ಲಿ ವಿಮಾನ ನಿಲ್ದಾಣ, ಯುವಕರಿಗೆ ಬೈಕ್…!
ಇನ್ನು ಈತನ ಪ್ರಣಾಳಿಕೆಯಲ್ಲಿ ಏಳು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ತುಫೈಲ್ ಅಹ್ಮದ್ ಗ್ರಾಮ ಪಂಚಾಯತ್ ಅಧ್ಯಕ್ಷನಾದ ಕೂಡಲೇ ಹಳ್ಳಿಯ ಎಲ್ಲ ಜನರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಲ್ಲದೆ ಗ್ರಾಮದಲ್ಲಿ ವಿಮಾನ ನಿಲ್ದಾಣ ಸೌಲಭ್ಯ, ಯುವಕರಿಗೆ ಅಪಾಚೆ ಬೈಕ್, ಹೆಣ್ಣುಮಕ್ಕಳಿಗೆ ಉಚಿತ ಬ್ಯೂಟಿ ಪಾರ್ಲರ್, ತಂಬಾಕಿನ ಉಚಿತ ಕಟ್ಟು ಮತ್ತು ಹಿರಿಯರಿಗೆ ಬೀಡಿ, ಟ್ಯಾಪ್ ವಾಟರ್ ಯೋಜನೆಯಲ್ಲಿ ನೀರಿನ ಬದಲು ಹಾಲಿನ ಪೂರೈಕೆ, ಹೊಲಗಳಲ್ಲಿ ಟೈಲ್ಸ್ ಅಳವಡಿಸುವ ಮೂಲಕ ನಗರೀಕರಣ ಮಾಡಲಾಗುವುದು ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಇನ್ನು ತುಫೈಲ್ ಅಹ್ಮದ್ ಅವರನ್ನು ಸಂಪರ್ಕಿಸಿದಾಗ ತಾನು ಈ ರೀತಿಯ ಪ್ರಣಾಳಿಕೆ ಬಿಡುಗಡೆ ಮಾಡಿಯೇ ಇಲ್ಲ. ಯಾರೋ ತಮಾಷೆಗಾಗಿ ಈ ರೀತಿ ಮಾಡಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ.