ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ವೇಳೆ ಒಂದೊಂದೇ ಮಹತ್ವದ ಸಂಗತಿಗಳು ಬಯಲಾಗುತ್ತಿದೆ. ಗಲಭೆ ಹಿನ್ನೆಲೆಯಲ್ಲಿ ಈಗಾಗಲೇ ಹಲವರ ಬಂಧನವಾಗಿದ್ದು, ಪೊಲೀಸರು ವ್ಯಾಪಕ ತನಿಖೆ ಮುಂದುವರಿಸಿದ್ದಾರೆ.
ಇದರ ಮಧ್ಯೆ ಮತ್ತೊಂದು ಮಹತ್ವದ ಸಂಗತಿ ಬಹಿರಂಗವಾಗಿದ್ದು, ಗಲಭೆ ನಡೆದ ದಿನದಂದು ಆ ಪ್ರದೇಶದ ವ್ಯಾಪ್ತಿಯಲ್ಲಿ ಮಾಮೂಲಿಗಿಂತ ದುಪ್ಪಟ್ಟು ಮೊಬೈಲ್ ಕರೆಗಳನ್ನು ಮಾಡಲಾಗಿದೆ ಎಂಬುದು ತಿಳಿದುಬಂದಿದೆ.
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಸುತ್ತಲಿನ ವ್ಯಾಪ್ತಿಯಲ್ಲಿ 5 ಮೊಬೈಲ್ ಟವರ್ ಗಳಿದ್ದು, ಗಲಭೆ ನಡೆದ ದಿನದಂದು ರಾತ್ರಿ 8ರಿಂದ 12 ರ ವರೆಗಿನ ಅವಧಿಯಲ್ಲಿ 12 ಸಾವಿರಕ್ಕೂ ಅಧಿಕ ಕರೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.
ಮಾಮೂಲಿನ ದಿನಗಳಲ್ಲಿ 5 ಮೊಬೈಲ್ ಟವರ್ ಗಳಲ್ಲಿ ನಿತ್ಯ 6000 ಕರೆಗಳು ದಾಖಲಾಗುತ್ತಿದ್ದು, ಆದರೆ ಗಲಭೆ ನಡೆದ ದಿನ 12 ಸಾವಿರಕ್ಕೂ ಅಧಿಕ ಕರೆಗಳು ದಾಖಲಾಗಿರುವುದರಿಂದ ಇದನ್ನು ಗಲಭೆಕೋರರು ಜನ ಸೇರಿಸಲು ಮಾಡಿದ್ದಾರೆಯೇ ಅಥವಾ ಭಯಗೊಂಡ ಸಾರ್ವಜನಿಕರು ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲು ತಮ್ಮ ಪರಿಚಯಸ್ಥರು ಹಾಗೂ ಕುಟುಂಬಸ್ಥರಿಗೆ ಮಾಡಿರುವ ಕರೆಯೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.