ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ಇತ್ತೀಚೆಗೆ ನೀಡಿದ್ದ ಹೇಳಿಕೆಯೊಂದು ವಿವಾದಕ್ಕೀಡಾಗಿದ್ದನ್ನು ಮತ್ತೊಮ್ಮೆ ಪ್ರಸ್ತಾಪಿಸಿರುವ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ, ನಾನು ಭಯಸ್ತನಲ್ಲ, ಇತ್ತೀಚಿನ ಒಂದು ಹೇಳಿಕೆ ವಿಚಾರದಲ್ಲಿ ಗೊತ್ತಿಲ್ಲದ ಸಮುದಾಯಗಳಿಂದ ಬೆಂಬಲ ವ್ಯಕ್ತವಾಯಿತು. ಹೀಗೆಲ್ಲ ಆಗುತ್ತೆ ಎಂಬುದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಎಸ್.ಜಿ.ಸಿದ್ದರಾಮಯ್ಯ ಅವರ ಯರೆಬೇವು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ನನಗೆ ಧೈರ್ಯ ತುಂಬಲೆಂದೇ ಈ ಕ್ರಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನನಗೆ ಮೊದಲು ಧೈರ್ಯ ಹೇಳಿದ್ದೇ ನನ್ನ ಗುರುಗಳು. ನಾಡಿನ ಪ್ರಗತಿಪರರನ್ನು ಕರೆಸಿ ಧೈರ್ಯ ತುಂಬಿದರು. ಇಂತಹ ಸಂದರ್ಭದಲ್ಲಿ ನನಗೆ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳು ಎಂದರು.
ನಾನು ಭಯಸ್ತನಲ್ಲ, ಮಾಗಡಿ ರಸ್ತೆಯಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ಬಂದವನು. ನನ್ನದೊಂದು ದೊಡ್ಡ ಚರಿತ್ರೆಯೇ ಇದೆ. ನಾನು ಯಾರಿಗೂ ಹೆದರುವುದೂ ಇಲ್ಲ. ನನಗೆ ಎಪ್ಪತ್ತು, ತಿನ್ನೋದು ಒಂದೊತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಮಾಜಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ ಹಂಸಲೇಖ, ರಾಜ್ಯದ ಮಕ್ಕಳಿಗೆ ಹಾಲು ಕೊಟ್ಟ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ. ಧರ್ಮೋಕ್ರಸಿ ಬದಿಗೆ ಸರಿಸಿ ಡೆಮೊಕ್ರಸಿ ಉಳಿಸಲಿ. ಬಸವಜಯಂತಿ ದಿನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯ, ತಕ್ಷಣ ಅನ್ನಭಾಗ್ಯ ಘೋಷಿಸಿದರು. ಇದರಿಂದ ಸೋಮಾರಿಗಳಿಗೆ ಪ್ರೋತ್ಸಾಹ ಕೊಟ್ಟಂತಾಯಿತು ಎಂಬ ಟೀಕೆಗಳು ವ್ಯಕ್ತವಾದವು. ಆದರೆ ದಾಸೋಹ ಪರಂಪರೆ ಗೊತ್ತಿದ್ದರೆ ಹೀಗೆ ಟೀಕಿಸುವುದಿಲ್ಲ, ಸಿದ್ದರಾಮಯ್ಯ ಅವರಿಗೆ ಶರಣ ಪರಂಪರೆ ಬಗ್ಗೆ ಅರಿವಿದೆ ಎಂದು ಶ್ಲಾಘಿಸಿದರು.