ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸಲು ನೌಕರರಿಂದ ಒತ್ತಾಯ ಕೇಳಿ ಬರುತ್ತಿದೆಯಾದರೂ ಇದಕ್ಕೆ ಸ್ಪಂದನೆ ಸಿಗುತ್ತಿಲ್ಲ. ಆದರೆ ಕೆಲವೊಂದು ರಾಜ್ಯ ಸರ್ಕಾರಗಳು ಇದನ್ನು ಮರು ಜಾರಿಗೊಳಿಸುವುದಾಗಿ ಹೇಳಿವೆ.
ಇದರ ಮಧ್ಯೆ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸಿ ಕೇಂದ್ರ ಸರ್ಕಾರದ ಮೇಲೆ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಲು ಒತ್ತಡ ಹೇರಲು ಸಿದ್ಧತೆ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಳೆ ಪಿಂಚಣಿ ಮರುಸ್ಥಾಪನೆ ಸಂಯುಕ್ತ ರಂಗವನ್ನು ರಚಿಸಿಕೊಳ್ಳಲಾಗಿದೆ.
ಮಂಗಳವಾರದಂದು ಬಿ.ಪಿ. ಸಿಂಗ್ ರಾವತ್ ಅಧ್ಯಕ್ಷತೆಯ ಈ ನಿಯೋಗವು ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಈ ವೇಳೆ ರಾಷ್ಟ್ರ ಮಟ್ಟದಲ್ಲಿ ಮುಂದೆ ನಡೆಸುವ ಹೋರಾಟಕ್ಕೆ ಬೆಂಬಲ ನೀಡುವಂತೆ ನಿಯೋಗ ಮನವಿ ಮಾಡಿದೆ.