ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಪದ್ಧತಿಯನ್ನೇ ಮುಂದುವರಿಸುವಂತೆ ರಾಜ್ಯ ಸರ್ಕಾರಿ ನೌಕರರು ಈ ಮೊದಲಿನಿಂದಲೂ ಆಗ್ರಹಿಸುತ್ತಿದ್ದು, ಇದೀಗ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ‘ಮಾಡು ಇಲ್ಲವೇ ಮಡಿ’ ಅನಿರ್ದಿಷ್ಟ ಹೋರಾಟಕ್ಕೆ ಇಳಿದಿದೆ.
ಸೋಮವಾರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಆರಂಭವಾಗಿದ್ದು, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಆಗಮಿಸಿರುವ ಎನ್.ಪಿ.ಎಸ್. ನೌಕರರು ಇದರಲ್ಲಿ ಪಾಲ್ಗೊಂಡಿದ್ದಾರೆ. ಹಳೆ ಪಿಂಚಣಿ ಪದ್ಧತಿ ಜಾರಿಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಸರ್ಕಾರಿ ನೌಕರರ ಹೋರಾಟಕ್ಕೆ ಮಣಿದು ಈಗಾಗಲೇ ರಾಜಸ್ಥಾನ, ಛತ್ತೀಸ್ಗಡ, ಪಂಜಾಬ್ ಮತ್ತು ಜಾರ್ಖಂಡ್ ರಾಜ್ಯಗಳು ಎನ್.ಪಿ.ಎಸ್. ರದ್ದು ಮಾಡಿ ಹಳೆ ಪಿಂಚಣಿ ಪದ್ಧತಿಯನ್ನು ಮರು ಜಾರಿಗೊಳಿಸಿದ್ದು, ಕರ್ನಾಟಕ ಸರ್ಕಾರವು ಸಹ ಇದನ್ನು ಅನುಸರಿಸಬೇಕು ಎಂಬುದು ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಒತ್ತಾಯವಾಗಿದೆ.