ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಾದಕ್ಕೆ ಗುರಿಯಾಗಿದ್ದ ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆಯನ್ನು ತಾವು ಅಧಿಕಾರಕ್ಕೆ ಬಂದ ಕೂಡಲೇ ಮರು ಪರಿಶೀಲಿಸುವುದಾಗಿ ಹೇಳಿದ್ದ ಕಾಂಗ್ರೆಸ್, ಇದೀಗ ಆ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಇದೀಗ ಹಳೆ ಪಠ್ಯಗಳ ತಿದ್ದುಪಡಿ ಹಾಗೂ ಹೊಸ ಪಠ್ಯ ಸೇರ್ಪಡೆ ಮಾಡಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪನವರ ಸಮಿತಿ ರೂಪಿಸಿದ್ದ ಪಠ್ಯವನ್ನೇ ಬಹುತೇಕವಾಗಿ ಮುಂದುವರಿಸಲಾಗಿದ್ದು, ಚಕ್ರವರ್ತಿ ಸೂಲಿಬೆಲೆಯವರ ‘ತಾಯಿ ಭಾರತೀಯ ಅಮರ ಪುತ್ರರು’ ಎಂಬ ಗದ್ಯವನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ. ಅಲ್ಲದೆ ಆರ್ ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಪಠ್ಯಕ್ಕೂ ಕೊಕ್ ನೀಡಲಾಗಿದ್ದು, ಇದರ ಬದಲಿಗೆ ‘ಸುಕುಮಾರಸ್ವಾಮಿಯ ಕಥೆ’ಯನ್ನು ಸೇರ್ಪಡೆ ಮಾಡಲಾಗಿದೆ.
ಇನ್ನುಳಿದಂತೆ ಆರನೇ ತರಗತಿಯಲ್ಲಿದ್ದ ನಿರ್ಮಲ ಸುರತ್ಕಲ್ ಅವರ ‘ನಮ್ಮದೇನಿದೆ ? ಬದಲಿಗೆ ಚೆನ್ನಣ್ಣ ವಾಲಿಕಾರ್ ಅವರ ‘ನೀ ಹೋದ ಮರುದಿನ’, ಏಳನೇ ತರಗತಿಯಲ್ಲಿದ್ದ ರಮಾನಂದ ಆಚಾರ್ಯ ಅವರ ‘ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ’ ಬದಲಿಗೆ ಡಾ. ಎಚ್ಎಸ್ ಅನುಪಮಾ ಅವರ ಸಾವಿತ್ರಿಬಾಯಿ ಫುಲೆ, ಎಂಟನೇ ತರಗತಿಯಲ್ಲಿದ್ದ ನರಸಿಂಹ ಐತಾಳ ಅವರ ‘ಭೂ ಕೈಲಾಸ ಪೌರಾಣಿಕ’ ನಾಟಕದ ಬದಲಿಗೆ ನೆಹರು ಅವರ ‘ಮಗಳಿಗೆ ಬರೆದ ಪತ್ರ’ ಆಯ್ಕೆ ಮಾಡಲಾಗಿದೆ.
ಹತ್ತನೇ ತರಗತಿಯಲ್ಲಿದ್ದ ಹೆಡಗೇವಾರ್ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು ?’ ಬದಲಿಗೆ ಶಿವಕೋಟ್ಯಾಚಾರ್ಯ ಅವರ ‘ಸುಕುಮಾರ ಸ್ವಾಮಿಯ ಕಥೆ’, 10ನೇ ತರಗತಿಯಲ್ಲಿದ್ದ ಆರ್ ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಬದಲಿಗೆ ಸಾರಾ ಅಬೂಬಕರ್ ಅವರ ‘ಯುದ್ಧ’, 10ನೇ ತರಗತಿಯಲ್ಲಿದ್ದ ಚಕ್ರವರ್ತಿ ಸೂಲಿಬೆಲೆಯವರ ‘ತಾಯಿ ಭಾರತೀಯ ಅಮರ ಪುತ್ರರು’ ಪಠ್ಯವನ್ನು ಪೂರ್ಣವಾಗಿ ಕೈ ಬಿಡಲಾಗಿದೆ.
ಇನ್ನು ಹತ್ತನೇ ತರಗತಿ ಪಠ್ಯದಲ್ಲಿದ್ದ ಲಕ್ಷ್ಮೀಶ ಅವರ ‘ವೀರಲವ’ ಗದ್ಯದಲ್ಲಿ ‘ವಾಲ್ಮೀಕಿ’ ಪರಿಚಯದ ತಿದ್ದುಪಡಿ, ಎಂಟನೇ ತರಗತಿಯಲ್ಲಿದ್ದ ಕೆ.ಟಿ. ಗಟ್ಟಿ ಅವರ ‘ಕಾಲವನ್ನು ಗೆದ್ದವರು’ ಬದಲಿಗೆ ವಿಜಯಮಾಲ ರಂಗನಾಥ್ ಅವರ ‘ಬ್ಲಡ್ ಗ್ರೂಪ್’, ಹಾಗೂ 9ನೇ ತರಗತಿಯಲ್ಲಿದ್ದ ಪಿ. ಸತ್ಯನಾರಾಯಣ ಭಟ್ ಅವರ ‘ಅಚ್ಚರಿಯ ಜೀವಿ ಇಂಬಳ’ದ ಬದಲಿಗೆ ದಸ್ತಗೀರ ಅಲ್ಲಿಭಾಯ್ ಅವರ ‘ಉರುಸುಗಳಲ್ಲಿ ಭಾವೈಕ್ಯತೆ’ ಸೇರ್ಪಡೆ ಮಾಡಲಾಗಿದೆ.