ಮಂಗಳೂರು: ಬಂಧನಕ್ಕೆ ಒಳಗಾಗಿದ್ದ ನಟ ವಿನೋದ್ ಆಳ್ವ ಅವರಿಗೆ ಜಾಮೀನು ನೀಡಲಾಗಿದೆ. ಹಲ್ಲೆ ಆರೋಪದಡಿ ವಿನೋದ್ ಆಳ್ವ(ಕುಮಾರ್) ಅವರನ್ನು ಬಂಧಿಸಲಾಗಿದ್ದು, ಏಪ್ರಿಲ್ 26 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಡುವನ್ನೂರು ಉದಯ್ ದೂರು ನೀಡಿದ್ದರು. ಗ್ರಾಮದ ದೇವಸ್ಥಾನದ ರಸ್ತೆ ಕಾಮಗಾರಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಪುತ್ತೂರಿನ ಪಡುಮಲೆ ನಾಗಬ್ರಹ್ಮ ದೇವಾಲಯ ಕಾಮಗಾರಿ ವೇಳೆ ನೀರಿನ ಪೈಪ್ ಒಡೆದು ಮನೆಗಳಿಗೆ ನೀರು ಪೂರೈಕೆ ಸ್ಥಗಿತವಾಗಿತ್ತು.
ಇದನ್ನು ಪ್ರಶ್ನಿಸಿದ್ದಕ್ಕೆ ವಿನೋದ್ ಆಳ್ವ ಮತ್ತು ದೀಕ್ಷಿತ್ ಹಲ್ಲೆ ನಡೆಸಿದ್ದರು ಎಂದು ಉದಯ್ ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜಾತಿ ನಿಂದನೆ ಆರೋಪದಡಿಯೂ ಕೇಸು ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋದ್ ಆಳ್ವ ಅವರು ಠಾಣೆಗೆ ಹಾಜರಾಗಿದ್ದು, ಅವರನ್ನು ಬಂಧಿಸಿ ಪುತ್ತೂರು ಕೋರ್ಟ್ ಗೆ ಹಾಜರುಪಡಿಸಿದ್ದು, ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ಹೇಳಲಾಗಿದೆ.