ಹಲ್ಲುಗಳಲ್ಲಿ ಮೂಡುವ ಕಪ್ಪಾದ ಅಥವಾ ಹಳದಿ ಬಣ್ಣದ ಕಲೆಗಳು ನಿಮ್ಮ ಸಹಜ ನಗುವಿನ ಸೌಂದರ್ಯವನ್ನು ಹಾಳು ಮಾಡಿ ಬಿಡುತ್ತವೆ. ನಾಲ್ಕು ಜನರ ಮುಂದೆ ನಗುವಾಗ ನಿಮ್ಮ ಹಳದಿ ಹಲ್ಲುಗಳು ನಿಮ್ಮ ಆತ್ಮವಿಶ್ವಾಸವನ್ನೇ ಕುಗ್ಗಿಸಿ ಬಿಡುತ್ತವೆ.
ಆಹಾರ ತಿಂದ ಬಳಿಕ ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ. ಬಾಯಿಯಲ್ಲೇ ಉಳಿಯುವ ಆಹಾರ ಬ್ಯಾಕ್ಟೀರಿಯಾಗಳ ಹುಟ್ಟಿಗೆ ಕಾರಣವಾಗುತ್ತದೆ. ಇದು ಸಕ್ಕರೆಯೊಂದಿಗೆ ಬೆರೆತು ಕೆಲವೊಮ್ಮೆ ಉಸಿರಿನ ದುರ್ವಾಸನೆಗೂ ಕಾರಣವಾಗುತ್ತದೆ.
ಇದರ ನಿವಾರಣೆಗೆ ಕಡ್ಡಾಯವಾಗಿ ದಿನಕ್ಕೆರಡು ಬಾರಿ ಬ್ರಶ್ ಮಾಡಿ. ಪ್ರತಿ ಬಾರಿ ಊಟವಾದ ಬಳಿಕ ಬಾಯಿ ಮುಕ್ಕಳಿಸುವುದರ ಜೊತೆ ಬೆರಳಿನಿಂದ ಹಲ್ಲನ್ನು ತಿಕ್ಕಿ. ಮತ್ತೆ ಬಾಯಿ ಮುಕ್ಕಳಿಸಿ. ಕೈಯನ್ನು ಸ್ವಚ್ಛವಾಗಿ ತೊಳೆಯಿರಿ. ರಾತ್ರಿ ಊಟವಾದ ಬಳಿಕ ಮಲಗುವ ಮುನ್ನ ಬ್ರಶ್ ಮಾಡುವುದನ್ನು ಮಕ್ಕಳಿಗೆ ಹೇಳಿ ಕೊಡಿ.
ಅಡುಗೆ ಸೋಡಾವನ್ನು ಹಲ್ಲುಪುಡಿ ಅಥವಾ ಪೇಸ್ಟ್ ನಂತೆ ಬಳಸಿ ಬ್ರಶ್ ಮಾಡಿ. ಇದು ನಿಮ್ಮ ಹಲ್ಲನ್ನು ಸ್ವಚ್ಛಗೊಳಿಸುತ್ತದೆ. ಹೀಗಿದ್ದೂ ಹಳದಿ ಕಟ್ಟಿದ ಹಲ್ಲಿನ ಸಮಸ್ಯೆ ದೂರವಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.