ಹಲ್ಲು ನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಹಿಂದೆ ವಯಸ್ಸಾದವರಿಗೆ ಮಾತ್ರ ಕಾಡ್ತಿದ್ದ ಈ ಸಮಸ್ಯೆ ಈಗ ಚಿಕ್ಕಮಕ್ಕಳಿಗೂ ಶುರುವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸಿಹಿ ತಿನ್ನುವುದು ಹಾಗೂ ಹಲ್ಲಿನ ಶುಚಿತ್ವದ ಕೊರತೆಯಿಂದಾಗಿ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ.
ಕಣ್ಣಿಗೆ ಕಾಣದ ಆದ್ರೆ ಸಹಿಸಿಕೊಳ್ಳಲಾಗದ ನೋವು ಇದು. ಹಲ್ಲು ನೋವಿನಿಂದ ಬಳಲುವವರು ತಕ್ಷಣ ವೈದ್ಯರ ಬಳಿ ಓಡ್ತಾರೆ. ಆದ್ರೆ ಮನೆಯಲ್ಲಿರುವ ಕೆಲವೊಂದು ವಸ್ತುಗಳಿಂದಲೇ ನೀವು ಹಲ್ಲು ನೋವನ್ನು ಗುಣಪಡಿಸಿಕೊಳ್ಳಬಹುದು.
ಐಸ್ ಕ್ಯೂಬ್ ಹಲ್ಲು ನೋವಿಗೆ ಉತ್ತಮ ಔಷಧಿ. ಐಸ್ ನ ಸಣ್ಣ ಸಣ್ಣ ತುಣುಕುಗಳನ್ನು ಒಂದು ಬಟ್ಟೆಯೊಳಗೆ ಹಾಕಿ. ಅದನ್ನು ಹಲ್ಲು ನೋವಾಗ್ತಿರುವ ಹೊರ ಜಾಗದಲ್ಲಿಟ್ಟು ಮಸಾಜ್ ಮಾಡಿ. ಹಲ್ಲು ನೋವು ಕಡಿಮೆಯಾಗುವವರೆಗೂ ಹೀಗೆ ಮಾಡುತ್ತಿರಿ.
ಹಲ್ಲು ನೋವಿರುವ ಜಾಗದಲ್ಲಿ ಲವಂಗವನ್ನಿಟ್ಟುಕೊಳ್ಳಿ. ಕೆಲ ಹೊತ್ತು ಲವಂಗ ಹಾಗೆ ಬಾಯಲ್ಲಿರಲಿ. ಲವಂಗದ ಎಣ್ಣೆಯನ್ನೂ ಹಲ್ಲು ನೋವಿಗೆ ಬಳಸಬಹುದು.
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಇದು ಕೂಡ ಹಲ್ಲು ನೋವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ.
ಈರುಳ್ಳಿಯಲ್ಲಿರುವ ಆಂಟಿಬ್ಯಾಕ್ಟೀರಿಯಾ ಗುಣ ಹಲ್ಲು ನೋವನ್ನು ಶಮನ ಮಾಡುತ್ತದೆ. ಈರುಳ್ಳಿಯನ್ನು ಸಣ್ಣಗೆ ಕಟ್ ಮಾಡಿ ಒಂದು ತುಣುಕನ್ನು ನೋವಿರುವ ಸ್ಥಳದಲ್ಲಿಟ್ಟುಕೊಳ್ಳಿ.