
ಹಾವುಗಳು ಮನುಷ್ಯರನ್ನು ಕಚ್ಚುವುದು ಸಾಮಾನ್ಯ. ಆದ್ರೆ ಅಮೆರಿಕದಲ್ಲೊಬ್ಬ ಭೂಪ ಹೆಬ್ಬಾವಿಗೆ ಕಚ್ಚಿ ತಲೆಯನ್ನೇ ತುಂಡರಿಸಿ ಹಾಕಿದ್ದಾನೆ. ಈ ಹೆಬ್ಬಾವನ್ನು ಮಹಿಳೆಯೊಬ್ಬಳು ಪ್ರೀತಿಯಿಂದ ಸಾಕಿದ್ದಳು. ಆ ಮಹಿಳೆಯೊಂದಿಗೆ ವ್ಯಕ್ತಿ ಜಗಳವಾಡಿದ್ದ, ಅದೇ ಕೋಪದಲ್ಲಿ ಹೆಬ್ಬಾವಿನ ತಲೆ ಕಚ್ಚಿ ಹಾಕಿದ್ದಾನೆ.
ಅಮೆರಿಕದ ಫ್ಲೋರಿಡಾದಲ್ಲಿ ವರದಿಯಾಗಿರೋ ಘಟನೆ ಇದು. ಆರೋಪಿಯ ಹೆಸರು ಜಸ್ಟಿನ್. ಆತ ಸ್ನೇಹಿತೆಯ ಫ್ಲಾಟ್‌ಗೆ ಹೋಗಿದ್ದ, ಅಲ್ಲಿ ಯಾವುದೋ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸ್ನೇಹಿತೆ ಸಾಕಿದ್ದ ಹೆಬ್ಬಾವಿನ ಮೇಲೆ ಜಸ್ಟಿನ್ ದಾಳಿ ಮಾಡಿದ್ದಾನೆ. ತನ್ನ ಹಲ್ಲಿನಿಂದ ಕಚ್ಚಿ ಹೆಬ್ಬಾವಿನ ತಲೆಯನ್ನೇ ತುಂಡರಿಸಿ ಹಾಕಿದ್ದಾನೆ. ಜಗಳ ಕೇಳಿ ಮಹಿಳೆಯ ಅಕ್ಕಪಕ್ಕದ ಮನೆಯವರು ಜಮಾಯಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಪೊಲೀಸರು ಬರುವ ಮುನ್ನವೇ ಜಸ್ಟಿನ್ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸ್ ತಂಡ ಅಲ್ಲಿಗೆ ತಲುಪಿದಾಗ ಹೆಬ್ಬಾವು ಮತ್ತು ತುಂಡರಿಸಿದ ತಲೆ ಮಾತ್ರ ಪತ್ತೆಯಾಗಿದೆ. ಜಸ್ಟಿನ್ ಮಾತ್ರವಲ್ಲ, ಹೆಬ್ಬಾವು ಸಾಕಿದ್ದ ಮಹಿಳೆ ಕೂಡ ಪೊಲೀಸರ ಭಯದಿಂದ ಪರಾರಿಯಾಗಿದ್ದಳು. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಜಸ್ಟಿನ್‌ನನ್ನು ಬಂಧಿಸಿದ್ದಾರೆ. ಹೆಬ್ಬಾವು ಸಾಕಿದ್ದ ಮಹಿಳೆಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.