ಗೌರಿ – ಗಣೇಶ ಹಬ್ಬ ಸಮೀಪಿಸುತ್ತಿದ್ದು, ಆಗಸ್ಟ್ 31ರ ಗಣೇಶೋತ್ಸವ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪಿಸಲು ಮಕ್ಕಳಿಂದ ಹಿಡಿದು ಯುವಕರು ವೃದ್ಧರಾದಿಯಾಗಿ ಎಲ್ಲರೂ ಸಡಗರ ಸಂಭ್ರಮದಿಂದ ಸಜ್ಜಾಗಿದ್ದಾರೆ. ಕೋವಿಡ್ ಕಾರಣಕ್ಕೆ ಕಳೆದೆರಡು ವರ್ಷ ಕಳೆಗುಂದಿದ್ದ ಗಣೇಶೋತ್ಸವ ಈಗ ಮತ್ತೆ ತನ್ನ ಎಂದಿನ ವೈಭವದಲ್ಲಿ ಆರಂಭವಾಗಲಿದೆ.
ಸರ್ಕಾರ ಕೂಡ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಹೇಳಿದ್ದು, ಉತ್ಸವಕ್ಕೆ ಇದು ಮತ್ತಷ್ಟು ಉತ್ಸಾಹ ತಂದಿದೆ. ಇದರ ಮಧ್ಯೆ ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಗಣೇಶ ಮೂರ್ತಿ ಜೊತೆಗೆ ಪುನೀತ್ ರಾಜಕುಮಾರ್ ಅವರಿರುವ ಮೂರ್ತಿಗಳಿಗೆ ಫುಲ್ ಡಿಮ್ಯಾಂಡ್ ಬಂದಿದ್ದು, ಇವುಗಳ ಖರೀದಿಗಾಗಿ ಈಗಾಗಲೇ ಆರ್ಡರ್ ಬುಕ್ ಮಾಡಲಾಗಿದೆ.
ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಹಲವು ತಿಂಗಳುಗಳೇ ಕಳೆದಿದ್ದರೂ ಸಹ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ಹೀಗಾಗಿ ಗಣೇಶೋತ್ಸವ ಸಂದರ್ಭದಲ್ಲಿ ಅವರನ್ನು ಮತ್ತೆ ಸ್ಮರಿಸಲು ಮುಂದಾಗಿರುವವರು ಗಣೇಶನ ಜೊತೆಗೆ ಅಪ್ಪು ಅವರಿರುವ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ವಿಗ್ರಹ ತಯಾರಕರೂ ಸಹ ಇದಕ್ಕೆ ಸ್ಪಂದಿಸಿ ಆಕರ್ಷಕ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.