ಹಬ್ಬಗಳ ಸಂದರ್ಭದಲ್ಲಿ ಹೊಸ ವಾಹನಗಳನ್ನು ಖರೀದಿಸಲು ಜನರು ಉತ್ಸುಕರಾಗಿರುತ್ತಾರೆ. ಈ ಸಂದರ್ಭದಲ್ಲಿ ಖರೀದಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆಯ ಜೊತೆಗೆ ಈ ವೇಳೆ ನೀಡಲಾಗುವ ಡಿಸ್ಕೌಂಟ್ ಕೂಡ ಇದಕ್ಕೆ ಪ್ರಮುಖ ಕಾರಣ.
ಆದರೆ ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಹೊಸ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ನಿರಾಸೆಯಾಗಿದೆ. ಹಬ್ಬದ ದಿನದಂದು ವಾಹನ ಸಿಗದಿರುವುದೇ ಇದಕ್ಕೆ ಕಾರಣ. ಸೆಮಿ ಕಂಡಕ್ಟರ್ ಹಾಗೂ ಕಚ್ಚಾ ವಸ್ತುಗಳ ಪೂರೈಕೆ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲವಾದ್ದರಿಂದ ವಾಹನಗಳ ಉತ್ಪಾದನೆ ಕುಂಠಿತಗೊಂಡಿದೆ ಎನ್ನಲಾಗಿದೆ.
ತಮಗೆ ಬೇಕಾದ ವಾಹನಗಳನ್ನೇ ಖರೀದಿಸಬೇಕೆಂಬ ಇಚ್ಛೆ ಹೊಂದಿರುವ ಗ್ರಾಹಕರು ಅದಕ್ಕಾಗಿ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿ ಹಬ್ಬದ ದಿನ ತಮಗೆ ಇಷ್ಟವಾದ ವಾಹನ ಬುಕ್ ಮಾಡಿ ಅಷ್ಟರಲ್ಲೇ ಸಂತಸಪಡಬೇಕಿದೆ. ರಷ್ಯಾ – ಉಕ್ರೇನ್ ನಡುವಿನ ಯುದ್ಧದ ಕಾರಣಕ್ಕೆ ಕಚ್ಚಾವಸ್ತುಗಳ ಪೂರೈಕೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದ್ದು, ಹೀಗಾಗಿ ವಾಹನಗಳ ಉತ್ಪಾದನೆಯೂ ಕುಂಠಿತಗೊಂಡಿದೆ.