ಹಬ್ಬಗಳೂ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಬಸ್ ಗಳ ಪ್ರಯಾಣ ದರವನ್ನು ಮನಬಂದಂತೆ ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪ್ರಯಾಣಿಕರು ಹಿಡಿಶಾಪ ಹಾಕುತ್ತಲೇ ಅನಿವಾರ್ಯವಾಗಿ ಪ್ರಯಾಣಿಸಬೇಕಾಗುತ್ತದೆ.
ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆಗಳನ್ನು ನೀಡುತ್ತಿದ್ದರು ಸಹ ಕೆಲ ಬಸ್ ಮಾಲೀಕರು ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಇದೀಗ ದೀಪಾವಳಿ ಸಮೀಪಿಸುತ್ತಿದ್ದು, ಹಬ್ಬದಾಚರಣೆಗಾಗಿ ತಮ್ಮ ತಮ್ಮ ಊರುಗಳಿಗೆ ತೆರಳಲು ಪ್ರಯಾಣಿಕರು ಸಿದ್ದರಾಗುತ್ತಿದ್ದಾರೆ.
ಹೀಗಾಗಿ ಮತ್ತೆ ಬಸ್ ಪ್ರಯಾಣದರ ಮನಬಂದಂತೆ ಹೆಚ್ಚಿಸುವ ಸಾಧ್ಯತೆ ಇರುವ ಮಧ್ಯೆ ಸಚಿವ ಶ್ರೀರಾಮುಲು ಎಚ್ಚರಿಕೆಯೊಂದನ್ನು ನೀಡಿದ್ದು ಪ್ರಯಾಣಿಕರನ್ನು ಸುಲಿಗೆ ಮಾಡುವ ಖಾಸಗಿ ಬಸ್ಸುಗಳ ಪರವಾನಗಿಯನ್ನೇ ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತದೆ. ಅಲ್ಲದೆ ಚೆಕ್ ಪೋಸ್ಟ್ ಗಳನ್ನು ಸಹ ಹೆಚ್ಚಿಸಿ ಬಸ್ಸುಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.