ನವರಾತ್ರಿ ಈಗಾಗಲೇ ಆರಂಭವಾಗಿದ್ದು, ನಾಡ ದಸರಾ ಆಚರಣೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಬಲು ಜೋರಾಗಿದ್ದು, ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಆನ್ಲೈನ್ ಹಾಗೂ ಆಫ್ಲೈನ್ ಮಾರುಕಟ್ಟೆಗಳಲ್ಲಿ ಭರ್ಜರಿ ವಹಿವಾಟು ನಡೆದಿದ್ದು, ವಾಹನಗಳ ಖರೀದಿಯೂ ಜೋರಾಗಿದೆ.
ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ಮಾರುಕಟ್ಟೆ, ಈಗ ಮತ್ತೆ ತನ್ನ ಹಿಂದಿನ ವೈಭವವನ್ನು ಪಡೆದುಕೊಂಡಿದೆ. ಶ್ರಾವಣ ಆರಂಭವಾದ ಬಳಿಕ ಚುರುಕು ಪಡೆದುಕೊಂಡಿದ್ದ ಮಾರುಕಟ್ಟೆ, ಗೌರಿ ಗಣೇಶದ ಹಬ್ಬದ ಸಂದರ್ಭದಲ್ಲಿ ಉತ್ತಮ ವಹಿವಾಟು ನಡೆಸಿತ್ತು. ಇದೀಗ ದಸರಾ ಹಬ್ಬದ ವೇಳೆ ಮತ್ತಷ್ಟು ಚುರುಕು ಪಡೆದುಕೊಂಡಿದೆ.
ವ್ಯಾಪಾರಿಗಳು ಸಹ ಖರೀದಿದಾರರಿಗೆ ಹಲವು ಆಫರ್ ಗಳನ್ನು ನೀಡುತ್ತಿದ್ದು, ವಹಿವಾಟು ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ. ಹೊಸ ವಾಹನಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು, ಉಡುಪು ಮೊದಲಾದವುಗಳ ಖರೀದಿ ಬಲು ಜೋರಾಗಿದೆ. ವ್ಯಾಪಾರ ವಹಿವಾಟು ಹೆಚ್ಚಿದಂತೆ ಉದ್ಯೋಗಿಗಳ ನೇಮಕಾತಿಯೂ ನಡೆದಿದ್ದು, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆ ಮತ್ತಷ್ಟು ಭರ್ಜರಿ ವಹಿವಾಟು ನಡೆಸುವ ಸಾಧ್ಯತೆ ಇದೆ.