ಹಬ್ಬದ ಋತುವಿನಲ್ಲಿ ಬ್ಯಾಂಕ್ ಆಫ್ ಬರೋಡಾ, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಗೃಹ ಸಾಲ ಮತ್ತು ಕಾರು ಸಾಲದ ದರಗಳ ಮೇಲೆ ರಿಯಾಯಿತಿ ಘೋಷಿಸಿದೆ. ಈ ಹಿಂದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಗೃಹ ಸಾಲದ ಬಡ್ಡಿ ದರಗಳನ್ನು ಕಡಿಮೆ ಮಾಡುವುದಾಗಿ ಘೋಷಿಸಿತ್ತು.
ಬ್ಯಾಂಕ್ ಆಫ್ ಬರೋಡಾ, ಪ್ರಸ್ತುತ ಗೃಹ ಸಾಲ ಮತ್ತು ಕಾರು ಸಾಲದ ಮೇಲೆ ಶೇಕಡಾ 0.25 ರಷ್ಟು ರಿಯಾಯಿತಿ ನೀಡಲಿದೆ. ಬ್ಯಾಂಕ್, ಗೃಹ ಸಾಲದ ಪ್ರಕ್ರಿಯೆ ಶುಲ್ಕ ವಿನಾಯಿತಿಯನ್ನು ಘೋಷಿಸಿದೆ. ಬ್ಯಾಂಕಿನ ಗೃಹ ಸಾಲದ ಬಡ್ಡಿ ದರವು ಶೇಕಡಾ 6.75 ಮತ್ತು ಕಾರ್ ಸಾಲವು ಶೇಕಡಾ 7 ರಿಂದ ಆರಂಭವಾಗುತ್ತದೆ.
ತ್ವರಿತ ಸಾಲಕ್ಕಾಗಿ ಬ್ಯಾಂಕ್ ಗ್ರಾಹಕರು, ಬ್ಯಾಂಕ್ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಹಾಗೆಯೇ ಡೋರ್ ಸ್ಟೆಪ್ ಸೇವೆಯೂ ಲಭ್ಯವಿದೆ ಎಂದು ಬ್ಯಾಂಕ್ ಹೇಳಿದೆ.
ಇನ್ನು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ, ಗ್ರಾಹಕರಿಗೆ ಸುಲಭವಾಗಿ ಸಾಲ ಸೌಲಭ್ಯ ನೀಡಲು ಫೆಸ್ಟಿವಲ್ ಬೊನಾನ್ಜಾ ಕೊಡುಗೆ ಆರಂಭಿಸಿದೆ. ಹಬ್ಬದ ಕೊಡುಗೆಯ ಅಡಿಯಲ್ಲಿ, ಬ್ಯಾಂಕ್ ತನ್ನ ಚಿಲ್ಲರೆ ಉತ್ಪನ್ನಗಳಾದ ಹೋಮ್ ಲೋನ್, ಕಾರ್ ಲೋನ್, ಪ್ರಾಪರ್ಟಿ ಲೋನ್, ಪರ್ಸನಲ್ ಲೋನ್, ಪಿಂಚಣಿ ಲೋನ್ ಮತ್ತು ಗೋಲ್ಡ್ ಲೋನ್ ನಂತಹ ಎಲ್ಲಾ ಸೇವಾ ಶುಲ್ಕಗಳು/ಪ್ರೊಸೆಸಿಂಗ್ ಶುಲ್ಕಗಳು ಮತ್ತು ದಾಖಲಾತಿ ಶುಲ್ಕಗಳನ್ನು ಮನ್ನಾ ಮಾಡಿದೆ.