ದೀಪಾವಳಿಯಂದು ಮನೆಯನ್ನು ಬಗೆ ಬಗೆಯಾಗಿ ಅಲಂಕಾರ ಮಾಡ್ತೇವೆ. ಕೆಲವರು ಮನೆ ತುಂಬ ದೀಪ ಬೆಳಗಿದ್ರೆ ಮತ್ತೆ ಕೆಲವರು ಎಲೆಕ್ಟ್ರಿಕಲ್ ಲೈಟ್ ಹಚ್ಚುತ್ತಾರೆ. ಆದ್ರೆ ರಂಗೋಲಿ ಇಲ್ಲದ ಮನೆ ಪರಿಪೂರ್ಣವೆನಿಸುವುದಿಲ್ಲ.
ಈಗಿನ ಕಾಲದಲ್ಲಿ ರಂಗೋಲಿ ಹಾಕುವುದು ಸುಲಭ. ಹಿಂದೆ ರಂಗೋಲಿ ಪುಡಿಯನ್ನು ಮನೆಯಲ್ಲಿಯೇ ಸಿದ್ಧಪಡಿಸಬೇಕಾಗಿತ್ತು. ಆದ್ರೀಗ ಬಣ್ಣ ಬಣ್ಣದ ರಂಗೋಲಿ ಪುಡಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಜೊತೆಗೆ ರಂಗೋಲಿ ಹಾಕಲು ಬರದವರಿಗಾಗಿ ರೆಡಿಮೆಡ್ ರಂಗೋಲಿ ತಟ್ಟೆ ಕೂಡ ಬರ್ತಾ ಇದೆ.
ಬೇರೆ ಬೇರೆ ಡಿಸೈನ್ ನ ರಂಗೋಲಿ ತಟ್ಟೆಗೆ ರಂಗೋಲಿ ಪುಡಿಯನ್ನು ಉದುರಿಸಿದ್ರೆ ಆಯ್ತು. ಚೆಂದದ ರಂಗೋಲಿ ಮೂಡುತ್ತದೆ. ಮನೆಯ ಅಂದಕ್ಕೆ ನೀವು ಬೇರೆ ಬೇರೆ ವಸ್ತುಗಳನ್ನು ಬಳಸಿ ರಂಗೋಲಿ ಸಿದ್ಧಪಡಿಸಬಹುದು. ಹೂ ಹಾಗೂ ದೀಪದ ಮೂಲಕ ನೀವು ರಂಗೋಲಿ ಹಾಕಬಹುದು. ಮೊದಲು ದೊಡ್ಡದಾದ ಹೂ ಬಿಡಿಸಿಕೊಳ್ಳಿ. ನಂತ್ರ ನಿಜವಾದ ಹೂವಿನ ಎಸಳುಗಳನ್ನು ರಂಗೋಲಿ ಮಧ್ಯೆ ಹರಡಿ. ಕೊನೆಯದಾಗಿ ಅಲ್ಲಲ್ಲಿ ದೀಪವನ್ನಿಡಿ.
ಬಣ್ಣ ಬಣ್ಣದ ರಂಗೋಲಿ ಪುಡಿ ಬಳಸಿ ನೀವು ಸುಲಭವಾಗಿ ರಂಗೋಲಿಯನ್ನು ಬಿಡಿಸಬಹುದು. ಮೊದಲು ಮೂರ್ನಾಲ್ಕು ಗೋಲಗಳನ್ನು ಬಿಡಿಸಿಕೊಳ್ಳಿ. ಒಂದರೊಳಗೊಂದು ಗೋಲ ಬಿಡಿಸಲು ಬರಲಿಲ್ಲವೆಂದಾದಲ್ಲಿ ದೊಡ್ಡ, ಸಣ್ಣ, ಅತಿ ಸಣ್ಣ ಪ್ಲೇಟ್ ಇಟ್ಟು ಗೋಲ ಮಾಡಿಕೊಳ್ಳಿ. ನಂತ್ರ ಒಂದೊಂದು ಗೋಲಕ್ಕೆ ಒಂದೊಂದು ಬಣ್ಣದ ರಂಗೋಲಿಯನ್ನು ತುಂಬಿ. ಸರಳವಾಗಿರುವ ಈ ರಂಗೋಲಿ ಆಕರ್ಷಣೀಯವಾಗಿರುತ್ತದೆ.