ಚೆನ್ನೈ: ಈದ್ ಪಾರ್ಟಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬ ಬಿರಿಯಾನಿ ಜೊತೆಗೆ 1.45 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ನುಂಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಕೊನೆಗೆ ಆತನಿಂದ ವೈದ್ಯರು ವಿಸರ್ಜನೆ ಮಾಡಿಸುವ ಮುಖಾಂತರ ಆಭರಣಗಳನ್ನು ಹೊಟ್ಟೆಯಿಂದ ಹೊರತೆಗೆದಿದ್ದಾರೆ.
ಚೆನ್ನೈನ 32 ವರ್ಷದ ವ್ಯಕ್ತಿಯೊಬ್ಬರು ಮೇ 3 ರಂದು ಸ್ನೇಹಿತನ ಗೆಳತಿ ಮನೆಯಲ್ಲಿ ಈದ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಊಟದ ವೇಳೆ ಬಿರಿಯಾನಿಯೊಂದಿಗೆ 1.45 ಲಕ್ಷ ರೂ. ಮೌಲ್ಯದ ಆಭರಣಗಳನ್ನು ನುಂಗಿದ್ದಾರೆ. ಅವರ ಹೊಟ್ಟೆಯಲ್ಲಿದ್ದ ಆಭರಣಗಳನ್ನು ಹಿಂಪಡೆಯಲು ವೈದ್ಯರು ಅವರಿಗೆ ಎನಿಮಾವನ್ನು ನೀಡಬೇಕಾಯಿತು.
ಈ ವ್ಯಕ್ತಿಯನ್ನು ಆತನ ಸ್ನೇಹಿತ ಈದ್ ಹಬ್ಬದ ಪಾರ್ಟಿಗೆ ಮನೆಗೆ ಆಹ್ವಾನಿಸಿದ್ದ. ಈ ಕೃತ್ಯ ಎಸಗುವಾಗ ಆತ ಪಾನಮತ್ತನಾಗಿದ್ದ ಎನ್ನಲಾಗಿದೆ. ಔತಣ ಮುಗಿದ ಬಳಿಕ ಮನೆಯವರು ಬೀರುವಿನಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಸರ ಮತ್ತು ವಜ್ರದ ಪೆಂಡೆಂಟ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಅತಿಥಿಗಳನ್ನು ಪರಿಶೀಲಿಸಿದ ನಂತರ, ಆಕೆಯ ಸ್ನೇಹಿತನ ಗೆಳೆಯ ಚಿನ್ನಾಭರಣಗಳನ್ನು ಕದ್ದಿದ್ದಾನೆ ಎಂಬ ಶಂಕೆಯಿಂದ ವಿರುಗಂಬಾಕ್ಕಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪೊಲೀಸರು ಅವನನ್ನು ಕರೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ವೈದ್ಯರ ಮುಖಾಂತರ ಪೊಲೀಸರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿಸಿದಾಗ, ಹೊಟ್ಟೆಯೊಳಗೆ ಆಭರಣಗಳಿರುವುದು ತಿಳಿದು ಬಂದಿದೆ.
ವೈದ್ಯರು ಆತನಿಗೆ ವಿಸರ್ಜನೆ ಮಾಡಿಸುವ ಮುಖಾಂತರ, ಆತನ ಹೊಟ್ಟೆಯಿಂದ 95,000 ರೂ.ಮೌಲ್ಯದ ಡೈಮಂಡ್ ಸರ ಹಾಗೂ 25,000 ರೂ.ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.